ದೊಡ್ಡಬಳ್ಳಾಪುರ: ಈ ಮುಂಚೆ ವರಮಹಾಲಕ್ಷ್ಮಿ ಹಬ್ಬದಂತೆ, ಕಳೆದ ಕೆಲ ವರ್ಷಗಳಿಂದ ತೀವ್ರಗತಿಯಲ್ಲಿ ಆಚರಣೆ ಆರಂಭವಾಗಿರುವ ತುಳಸಿ ಹಬ್ಬವನ್ನು ತಾಲೂಕಿನ ಮನೆಗಳಲ್ಲಿ ಶ್ರದ್ಧಾಭಕ್ತಿ ಸಡಗರದಿಂದ ಆಚರಿಸಲಾಯಿತು.
ಕಾರ್ತಿಕ ಮಾಸ ಶುಕ್ಲಪಕ್ಷದ ದ್ವಾದಶಿಯಂದು ಬರುವ ಈ ಆಚರಣೆಯಲ್ಲಿ ಮಹಿಳೆಯರು ಬೃಂದಾವನವನ್ನು ತಳಿರು ತೋರಣ, ಬಾಳೆಕಂದುಗಳಿಂದ ವಿಶೇಷವಾಗಿ ಸಿಂಗರಿಸಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು.

ತುಳಸಿ ಗಿಡದೊಂದಿಗೆ ಬೆಟ್ಟದ ನಲ್ಲಿಕಾಯಿಯ ರೆಂಬೆಯನ್ನು ಇಟ್ಟು , ಕೃಷ್ಣನ ಮೂರ್ತಿ ಅಥವಾ ಫೋಟೋ ಪೂಜಿಸಿ ಮುತೈದೆಯರಿಗೆ ಹರಿಶಿಣ ಕುಂಕುಮ ನೀಡುವುದು ಈ ಆಚರಣೆಯ ವೈಶಿಷ್ಟ್ಯವಾಗಿದೆ.
ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಗಿಡವಿರುವುದು ವಾಡಿಕೆಯಾಗಿದ್ದು, ತುಳಸಿ ಗಿಡ ಐಶ್ವರ್ಯವನ್ನೂ, ಸಂತಸವನ್ನೂ ತರುತ್ತದೆ. ಅಕಾಲಿಕ ಮರಣ ತಡೆಯುತ್ತದೆ ಎನ್ನುವ ನಂಬಿಕೆಯಿದೆ.
ಆಯುರ್ವೇದದಲ್ಲಿ ಪ್ರಮುಖ ಔಷಧ ಸಸ್ಯವೂ ಆಗಿರುವುದು ತುಳಸಿಯ ಮಹತ್ವವನ್ನು ಸಾರುತ್ತದೆ.