ದೊಡ್ಡಬಳ್ಳಾಪುರ (Doddaballapura hospitals): ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆಗಲ್ಲಿ ವೈದ್ಯರ ಕೊರತೆ ಮಿತಿಮೀರಿದ್ದು, ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ, ಕೊನೇನಹಳ್ಳಿ, ಸಾಸಲು, ಕನಸವಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ತುರ್ತು ಸಂದರ್ಭಗಳಲ್ಲಿ ರೋಗಿಗಳು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಸ್ಥಳೀಯರದ್ದಾಗಿದೆ.
ವೈದ್ಯರ ಟ್ರಾನ್ಫರ್, ತರಬೇತಿ, ಮುಂದುವರಿದ ಶಿಕ್ಷಣದ ಕಾರಣ ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗಿದೆ. ಈ ಮುಂಚೆ ದೊಡ್ಡ ಹೆಜ್ಜಾಜಿ, ಕೊನೇನಹಳ್ಳಿ, ಕನಸವಾಡಿ, ತೂಬಗೆರೆ ಆಸ್ಪತ್ರೆಗಳ್ಳಿ ಇಬ್ಬರು ವೈದ್ಯರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಒಬ್ಬರೆ ಕಾರ್ಯನಿರ್ವಗಿಸಬೇಕಿದೆ.
ಇನ್ನೂ ಉಳಿದಿರುವ ಅಕ್ಕಪಕ್ಕದ ಆಸ್ಪತ್ರೆಗಳ ವೈದ್ಯರನ್ನು ಕೊರತೆ ಇರುವ ಎರಡು, ಮೂರು ಆಸ್ಪತ್ರೆಗೆ ಡೆಪ್ಟೇಷನ್ ಮಾಡುತ್ತಿರುವುದರಿಂದ ಎಲ್ಲಿಯೂ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಅವರಿಗೆ ತರಬೇತಿ, ಮೀಟಿಂಗ್ ಮತ್ತಿತರ ಹೆಚ್ಚುವರಿ ಕೆಲಸದಿಂದ ರೋಗಿಗಳು ಪರಿಸ್ಥಿತಿ ಕೇಳುವವರೇ ಇಲ್ಲವಾಗುತ್ತಿದೆ.
ಈ ಸಮಸ್ಯೆ ಉಂಟಾಗದಂತೆ ಎಲ್‌ಸಿಡಿಆರ್ (LCDR) ಹುದ್ದೆ ನೇಮಕ ಮಾಡಿಕೊಂಡು, ಈ ರೀತಿ ಕೊರತೆ ಎದುರಾಗುವ ಆಸ್ಪತ್ರೆಗೆ ಆ LCDR ವೈದ್ಯರನ್ನು ಕಳುಹಿಸಿ ಸರಿ ದೂಗಿಸಲಾಗುತ್ತಿತ್ತು. ಆದರೆ ಈಗ ಆ ಹುದ್ದೆ ಇಲ್ಲವಾಗಿರುವುದರಿಂದ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ದೊಡ್ಡ ತಾಲೂಕಾಗಿದ್ದು, ಹೆಚ್ಚಿನ ಜನಸಂಖ್ಯೆ ಹೊಂದಿದೆ. ಅಲ್ಲದೆ ಹಿಂದುಳಿದ ತಾಲೂಕಾಗಿರುವುದರಿಂದ ಸ್ಥಳೀಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ದೊರಕದೆ, ದೂರದೂರದ ಊರುಗಳಿಂದ ನಗರಕ್ಕೆ ಚಿಕಿತ್ಸೆ ಪಡೆಯಲು ಬರಬೇಕಾದ ಅನಿವಾರ್ಯತೆ ಎದುರಾಗಿದೆ.
ಹಗಲು ಹೊತ್ತಿನಲ್ಲಿ ಚಿಕಿತ್ಸೆ ಪಡೆಯಲು ದೊಡ್ಡಬಳ್ಳಾಪುರಕ್ಕೆ ತೆರಳಬಹುದು. ಆದರೆ ರಾತ್ರಿ ಸಂದರ್ಭದಲ್ಲಿ, ತುರ್ತು ಸಂದರ್ಭಗಳಲ್ಲಿ ಗತಿ ಏನು ಎಂಬ ಪ್ರಶ್ನೆ ಎದುರಾಗಿದೆ.
ಈ ಕುರಿತು ಮಾಹಿತಿ ಪಡೆಯಲು ದೊಡ್ಡಬಳ್ಳಾಪುರ ತಾಲೂಕು ವೈದ್ಯಾಧಿಕಾರಿಯವರನ್ನು ಸಂಪರ್ಕಿಸಿದಾಗ ತಾಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಇತರೆ ಆಸ್ಪತ್ರೆಗಳಿಂದ ಡೆಪ್ಟೇಷನ್ ಹಾಕಲಾಗಿದೆ ಎಂದಿದ್ದಾರೆ.
ಒಟ್ಟಾರೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮೀಣ ಜನರ ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಇರುವ ಸರಕಾರಿ ಆಸ್ಪತ್ರೆಗಳು ವೈದ್ಯರ ಕೊರತೆ, ಅಗತ್ಯ ಸಿಬ್ಬಂದಿಗಳ ಕೊರತೆಯಿಂದ ಬಳಲುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಗಳಿಗೆ ಮೊದಲು ತುರ್ತು ಚಿಕಿತ್ಸೆ ನೀಡಬೇಕಾದ ಅನಿವಾರ್ಯ ಉಂಟಾಗಿದೆ.