ಬೆಂಗಳೂರು: ಜನರ ನಡುವೆ ಬೆಂಕಿ ಹಚ್ಚುವುದು, ಒಡಕು ತರುವುದೇ ಕಾಂಗ್ರೆಸ್‌ನ ಬ್ರ್ಯಾಂಡ್ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (RAshoka) ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ಚೂರು ಮಾಡಿ ಮಿನಿ ಪಾಕಿಸ್ತಾನ ನಿರ್ಮಿಸುವುದು ಕಾಂಗ್ರೆಸ್‌ನ ಉದ್ದೇಶ. ಅದಕ್ಕಾಗಿ ಮಠ ಮಂದಿರಗಳ, ರೈತರ ಜಮೀನು ಲೂಟಿ ಮಾಡಲಾಗುತ್ತಿದೆ. ಜನರ ನಡುವೆ ಬೆಂಕಿ ಹಚ್ಚುವ ಹಾಗೂ ಒಡಕು ಮೂಡಿಸುವ ಕೆಲಸವನ್ನು ಬ್ರಿಟಿಷರಿಂದ ಕಾಂಗ್ರೆಸ್ಸಿಗರು ಉಡುಗೊರೆಯಾಗಿ ಪಡೆದಿದ್ದಾರೆ. ಇಂತಹ ಕೆಲಸ ಮಾಡುವುದೇ ಅವರ ಬ್ರ್ಯಾಂಡ್ ಎಂದರು.
ಬಿಜೆಪಿ ಕಚೇರಿಯಲ್ಲಿ ನಾಲ್ಕು ಗಂಟೆಗೂ ದೀರ್ಘ ಅವಧಿಯ ಸಭೆ ನಡೆದಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಉತ್ತಮವಾದ ಸದಸ್ಯತ್ವ ಅಭಿಯಾನ ಮಾಡಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಆದರೆ ಬಿಜೆಪಿಯಲ್ಲಿ ಸ್ಥಳೀಯ ಮಟ್ಟದಲ್ಲಿ ಚುನಾವಣೆ ನಡೆಯಲಿದೆ.
ಈ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಜನರು ಬೇಸತ್ತು ಬಿಜೆಪಿಗೆ ಸದಸ್ಯರಾಗಿ ಬಂದಿದ್ದಾರೆ.
ಒಟ್ಟು 74 ಲಕ್ಷ ಹೊಸ ಸದಸ್ಯರು ಪಕ್ಷಕ್ಕೆ ಬಂದಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸದಸ್ಯತ್ವ ಅಭಿಯಾನ ಪ್ರಮುಖ ಕಾರಣವಾಗಿದೆ. ಇದೇ ರೀತಿ ಮುಂದೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸದಸ್ಯತ್ವ ಅಭಿಯಾನ ನೆರವಾಗಲಿದೆ ಎಂದರು.
ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಏನೇ ಸಮಸ್ಯೆಗಳಿದ್ದರೂ ವರಿಷ್ಠರು ಅದನ್ನು ಸರಿಪಡಿಸಲಿದ್ದಾರೆ ಎಂದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						