ವಾಷಿಂಗ್ಟನ್; ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ನಟ, ಡಾ.ಶಿವರಾಜ್‌ಕುಮಾರ್ (Dr.Shivarajkumar) ಅವರಿಗೆ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ.
ಸ್ಥಳೀಯ ಕಾಲಮಾನ ಬೆಳಗ್ಗೆ 8 ಗಂಟೆ, ಭಾರತೀಯ ಕಾಲಮಾನದ ಪ್ರಕಾರ ಸಂಜೆ 6 ಗಂಟೆಗೆ ಶಿವಣ್ಣ ಅವರನ್ನು ಅಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಲಾಗಿತ್ತು.
ಅಮೇರಿಕಾದ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್‌ಗೆ ದಾಖಲಾಗಿದ್ದ ಶಿವರಾಜ್ ಕುಮಾರ್ ಅವರಿಗೆ ಸತತ 6 ಗಂಟೆಗಳ ಕಾಲ ಪಿತ್ತಕೋಶ ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಮೆರಿಕದಿಂದ ವೈದ್ಯರು ಮಾಹಿತಿ ನೀಡಿದ್ದಾರೆ.
ಡಾ.ಮುರುಗೇಶ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಮೇರಿಕಾ ಕಾಲಮಾನ ಮಧ್ಯಾಹ್ನ 12 ಗಂಟೆಗೆ ಆಪರೇಷನ್ ಮುಗಿದಿದೆ. ದೇವರ ಆಶೀರ್ವಾದ, ಎಲ್ಲರ ಹಾರೈಕೆಯಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಎಂದು ಆಮರಿಕದಿಂದ ಡಾ.ಮುರುಗೇಶ್ ಮಾಹಿತಿ ನೀಡಿದ್ದಾರೆ.
ಶಸ್ತ್ರಚಿಕಿತ್ಸೆ ಬಳಿಕ ವೀಡಿಯೋ ಮೂಲಕ ಮಾತನಾಡಿದ ಅವರು, ದೇವರ ದಯೆಯಿಂದ ಹಾಗೂ ಹಲವರ ಆಶೀರ್ವಾದ ಹಾಗೂ ಪ್ರಾರ್ಥನೆಯಿಂದ ಸರ್ಜರಿ ಯಶಸ್ವಿಯಾಗಿದೆ. ಪ್ರಮುಖ ಹಂತ ಪೂರ್ಣಗೊಂಡಿದೆ. ಶಿವಣ್ಣ ಚೆನ್ನಾಗಿ ಸ್ಪಂದಿಸಿದ್ದಾರೆ. ಸರ್ಜರಿ ನಂತರವೂ ಆರಾಮಾಗಿದ್ದಾರೆ. ಅವರು ಶೀಘ್ರವೇ ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.
ಸದ್ಯ ಐಸಿಯುನಲ್ಲಿರುವ ಶಿವರಾಜ್ ಕುಮಾರ್‌ಗೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. 10 ದಿನಗಳ ಕಾಲ ಆಸ್ಪತ್ರೆಯಲ್ಲಿ ಶಿವರಾಜ್ ಕುಮಾರ್ ಇರಲಿದ್ದಾರೆ. ಶಿವರಾಜ್ ಕುಮಾರ್ ಆರೋಗ್ಯದ ಕುರಿತು ತೀವ್ರ ನಿಗಾವಹಿಸಲಾಗುತ್ತದೆ. ಬಳಿಕ ಶಿವರಾಜ್‌ಕುಮಾರ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Here's a health update on #Shivanna from Dr. Murugesh Manoharan, who performed the operation, joined by Geetha Shivarajkumar and Madhu Bangarappa.#DrShivarajkumar #Shivarajkumar pic.twitter.com/JL2Mr41Y3D
— Bhargavi (@IamHCB) December 25, 2024
ಆಪರೇಷನ್ ಗೆ ತೆರಳುವ ಮುನ್ನ ತನ್ನೆಲ್ಲಾ ಆಪ್ತರೊಂದಿಗೆ ಶಿವರಾಜ್ ಕುಮಾರ್ ಮಾತುಕತೆ ನಡೆಸಿದ್ದಾರೆ. ತಮ್ಮ ಆತ್ಮೀಯ ಗೆಳೆಯರು, ಸಂಬಂಧಿಕರು, ಅಭಿಮಾನಿಗಳ ಜೊತೆಗೆ ಫೋನ್‌ನಲ್ಲಿ ಮಾತನಾಡಿದರು.
ತಾವು ಅಮೆರಿಕದಲ್ಲಿರುವಾಗ ಬೆಂಗಳೂರಿನಲ್ಲಿರುವ ತಮ್ಮ ಮನೆಯನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್ ಹಾಗೂ ಮನೆಯ ಕೆಲಸದವರೊಂದಿಗೂ ವಿಡಿಯೋ ಕಾಲ್ ಮಾಡಿ ಮಾತುಕತೆ ನಡೆಸಿದರು. ಎಲ್ಲರಿಗೂ ತಾವು ಇನ್ನು ಕೆಲವೇ ನಿಮಿಷಗಳಲ್ಲಿ ಆಪರೇಷನ್ ಗೆ ಹೋಗುತ್ತಿದ್ದು, ಶೀಘ್ರವೇ ಗುಣಮುಖರಾಗಿ ಬೆಂಗಳೂರಿಗೆ ಮರಳುವುದಾಗಿ ತಿಳಿಸಿದರು.
ಸಿಎಂ ಕರೆ
ಆಪರೇಷನ್‌ಗೂ ಮುನ್ನ ನಿನ್ನೆ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿವರಾಜ್ ಕುಮಾರ್ ಅವರಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆನಂತರ ಟ್ವಿಟ್ ಮಾಡಿರುವ ಸಿಎಂ, ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ ಎಂದು ತಿಳಿಸಿದ್ದರು.
ನನಗೆ ತಿಳಿದಂತೆ ಶಿವರಾಜ್‌ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಡಾ.ಶಿವರಾಜ್‌ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳಿಗೆ ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ.ಶಿವರಾಜ್ ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ ಎಂದು ತಿಳಿಸಿದ್ದಾರೆ.