ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಅನೇಕ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರು, ಆಕ್ರೋಶ, ಆರೋಪವನ್ನು ರಾಜ್ಯ ಸರ್ಕಾರದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಹಿರಂಗಪಡಿಸಿದ್ದಾರೆ.
ನಗರದ ತಾಲೂಕು ಕಚೇರಿಗೆ ನಿಗದಿ ಸಮಯ 10ಗಂಟೆಗೆ ದಿಢೀರ್ ಭೇಟಿ ನೀಡಿದ ಅವರು, ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದೆ, ಕಚೇರಿಗಳು ಖಾಲಿ ಇರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದರು.
ಉಪವಿಭಾಗಾಧಿಕಾರಿ, ತಹಶಿಲ್ದಾರ್, ರಿಜಿಸ್ಟ್ರಾರ್ ಸೇರಿದಂತೆ ತಾಲೂಕು ಕಚೇರಿಯ ಬಹುತೇಕ ಅಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಾಗದೆ ಇರುವುದರಿಂದ ಕೆರಳಿದ ಸಚಿವ ಕೃಷ್ಣ ಬೈರೇಗೌಡ ಹಾಜರಾತಿ ಪುಸ್ತಕವನ್ನು ಹಿಡಿದು, ಶಾಲೆಯಲ್ಲಿ ಮಕ್ಕಳ ಹಾಜರಾತಿ ಪಡೆಯುವಂತೆ ಅಧಿಕಾರಿಗಳ ಅಟೆಂಡೆನ್ಸ್ ಪಡೆದರು.
ಸಚಿವರ ಭೇಟಿ ವಿಷಯ ತಿಳಿಯುತ್ತಿದ್ದಂತೆ ಕಚೇರಿಗೆ ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಹಾಗೂ ಇತರ ಅಧಿಕಾರಿಗಳು ದೌಡಾಯಿಸಿದರು.
ಅಧಿಕಾರಿಗಳ ಉದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡ, ಆಫೀಸಿಗೆ ಬರಲು ಹೊತ್ತುಗೊತ್ತು ಇಲ್ವಾ..? ನೀವ್ ಬಂದಾಗ ಆಫೀಸ್ ಅಷ್ಟೇ..? ಎಂದು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ಬೇಜವಬ್ದಾರಿ ವರ್ತನೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ. ತಾಲೂಕು ಕಚೇರಿಯಲ್ಲಿನ ಭ್ರಷ್ಟಾಚಾರದ ಕುರಿತು ಕಠಿಣ ಮಾತುಗಳು ಬೇಸರ ವ್ಯಕ್ತಪಡಿಸಿದರು.
ಯಾರ್ರಿ ಅದು ಚೇತನ್, ಆ ಮಹಾನುಭಾವನ ದರ್ಶನ ಮಾಡಲು ಬಂದಿದ್ದೇನೆ. ಜನ ಕೊಂಡಾಡ್ತಾ ಇದ್ದಾರೆ ಅವರ ಕಾರ್ಯ ವೈಖರಿಯ ಬಗ್ಗೆ.. ಒಂದ್ ಕೆಲಸ ಮಾಡೀಮಾ ಯಾವ ಯಾವ ಕೆಲಸಕ್ಕೆ ಎಷ್ಟು ಅಂತ ಬೋರ್ಡ್ ಹಾಕಿಬಿಡಿ, ಅಟ್ಲೀಸ್ಟ್ ಫೀಕ್ಸ್ ಮಾಡಿಬಿಡಿ, ಓಗ್ಲಿ ಅದ್ ಆದ್ರೂ ಮಾಡಿ ಬಿಡಿ, ಚೌಕಾಸಿ ಮಾಡೋದು ತಪ್ಪುತ್ತೆ.
ಅಧಿಕೃತ ಮಾಡಿಬಿಡಿ ಎಲ್ಲವನ್ನು, ಇಷ್ಟು ಪರ್ಸಂಟೇಜ್ ಕೊಡದಿದ್ದರೆ ಕೆಲಸ ಆಗಲ್ಲ.. ಯಾರ್ ಯಾರಿಗೆ ಎಷ್ಟು ಎಷ್ಟು, ಇಷ್ಟು ಪರ್ಸಂಟೇಜ್ ಮಂತ್ರಿಗೆ ಹೋಗುತ್ತೆ.. ಅದನ್ನು ಹಾಕಿಬಿಡಿ ಪರ್ವಾಗಿಲ್ಲ ಎಂದು ಎರಡು ಕೈಜೋಡಿಸಿ ಕೈ ಮುಗಿದು ಬಿಟ್ಟರು. ಸ್ಥಳಕ್ಕೆ ಜಿಲ್ಲಾಧಿಕಾರಿ ಶಿವಶಂಕರ್ ಓಡೋಡಿ ಬಂದರು (ಮತ್ತೊಂದು ವರದಿ ಬರಲಿದೆ)