
ಬೆಂಗಳೂರು: ಕೆಎಂಎಫ್ ವತಿಯಿಂದ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು (Nandini dosa-idli) ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ಹಿಟ್ಟು ಪ್ಯಾಕಿಂಗ್ ಘಟಕವನ್ನು ಆರಂಭಿಸಲಾಗಿದೆ. ಮೊದಲ ಹಂತದಲ್ಲಿ ನಗರದಲ್ಲಿ ಪ್ರತಿದಿನ 10 ರಿಂದ 20 ಸಾವಿರ ಕೆಜಿ ಇಡ್ಲಿ ಮತ್ತು ದೋಸೆ ಹಿಟ್ಟು ಮಾರಾಟವಾಗಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ ಮಾರುಕಟ್ಟೆಯಲ್ಲಿರುವ ಖಾಸಗಿ ಕಂಪನಿಯ ದೋಸೆ, ಇಡ್ಲಿ ಹಿಟ್ಟು ದರಕ್ಕಿಂತ ಕಡಿಮೆ ದರದಲ್ಲಿಯೇ ಉತ್ಪನ್ನವನ್ನು ಕೆಎಂಎಫ್ ಪರಿಚಯಿಸಿದೆ. 450 ಗ್ರಾಂ ಪ್ಯಾಕ್ ಗೆ 40 ರೂ. ಮತ್ತು 900 ಗ್ರಾಮ ಪ್ಯಾಕ್‌ಗೆ 80 ರೂ. ದರವನ್ನು ನಿಗದಿ ಮಾಡಲಾಗಿದೆ.
ಈ ಉತ್ಪನ್ನಕ್ಕೆ ಜನರ ಪ್ರತಿಕ್ರಿಯೆನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ ನಗರ, ಪಟ್ಟಣದಲ್ಲಿಯೂ ಇದನ್ನು ಮಾರಾಟ ಮಾಡಲಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಹೇಳಿದ್ದಾರೆ.
ಕೆಎಂಎಫ್ ಅಧಿಕಾರಿಗಳ ಪ್ರಕಾರ ಬೆಂಗಳೂರು ನಗರದಲ್ಲಿ ಕೆಲಸದ ಒತ್ತಡವಿದೆ. ಆದ್ದರಿಂದ ಇಲ್ಲಿ ರೆಡಿ ಟು ಈಟ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದ್ದರಿಂದ ಖಾಸಗಿ ಕಂಪನಿಗಳ ಮಾದರಿಯಲ್ಲಿ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ತರಲಾಗಿದೆ.
ಜನರ ಪ್ರತಿಕ್ರಿಯೆ ನೋಡಿಕೊಂಡು ಬೇರೆ ನಗರಕ್ಕೂ ವ್ಯಾಪಾರ ವಿಸ್ತರಣೆ ಮಾಡಲಾಗುತ್ತದೆ. ಬೇಡಿಕೆ ಹೆಚ್ಚಿದರೆ ಬೇರೆ ಕಡೆಯೂ ಘಟಕಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						