ಬೆಂಗಳೂರು: ರಾಜ್ಯದಲ್ಲಿ HMPV ವೈರಸ್ ನ ಎರಡು ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ , ಸೋಂಕು ಹರಡದಂತೆ ಸರ್ಕಾರ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಚೈನಾ ದೇಶದಲ್ಲಿ ಹೆಚ್ ಎಂ ಪಿ ವಿ ವೈರಸ್ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವೈರಸ್ ಪತ್ತೆಯಾಗಿರುವ ಮಾಹಿತಿ ದೊರೆತಿದೆ. ಆದ್ದರಿಂದ ಈ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ.
ಆರೋಗ್ಯ ಸಚಿವರು ಈಗಾಗಲೇ ಸಭೆ ನಡೆಸುತ್ತಿದ್ದು, ವೈರಸ್ ತಡೆಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದರು.
ಸೋಂಕು ತಡೆಯ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪುನ: ಪ್ರಾರಂಭಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಆರೋಗ್ಯ ಸಚಿವರು ಸಭೆ ನಡೆಸುತ್ತಿದ್ದು, ರಾಜ್ಯದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ನಕ್ಸಲರು ಶರಣಾಗುವ ಸಾಧ್ಯತೆಯಿದೆ
ನಕ್ಸಲರ ಶರಣಾಗತಿಗೆ ಸರ್ಕಾರ ಸಿದ್ಧವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಕ್ಸಲರು ಶರಣಾಗಲಿ ಎಂದು ಕರೆ ನೀಡಿದ್ದೇನೆ ಹಾಗೂ ನಕ್ಸಲರ ಮನ:ಪರಿವರ್ತನೆಯಾಗಿ ಶರಣಾಗುವ ಸಾಧ್ಯತೆಯಿದೆ. ಸಮಾಜದ ಮುಖ್ಯವಾಹಿನಿಗೆ ಅವರನ್ನು ಕರೆತರುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಕೇಂದ್ರ ಸಚಿವ ಹೆಚ್‌ಡಿ.ಕುಮಾರಸ್ವಾಮಿಯವರು ರಾಜ್ಯಸರ್ಕಾರದ ಕಮೀಷನ್ ಪ್ರಮಾಣ ಶೇ. 60 ಕ್ಕೆ ತಲುಪಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದಿನ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಕಮೀಷನ್ ಆರೋಪವನ್ನು ಗುತ್ತಿಗೆದಾರ ಸಂಘದ ಅಧ್ಯಕ್ಷರು ಕೆಂಪಯ್ಯನವರು ಮಾಡಿದ್ದರು. ಬಿಜೆಪಿಯವರು ಕಮೀಷನ್ ತೆಗೆದುಕೊಂಡಿರುವುದಾಗಿ ಕೆಂಪಯ್ಯನವರು ಆರೋಪಿಸಿದ್ದಾಗಿ ತಿಳಿಸಿದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
					 
					 
						 
						 
						 
						