ನವದೆಹಲಿ: ಇತ್ತೀಚಿಗಷ್ಟೆ ಕೈಗಾರಿಕಾ ವಲಯದ ಅಭಿವೃದ್ಧಿ ಕಾರ್ಯಗಳ ಕುರಿತು ರಾಜ್ಯ ಸರ್ಕಾರ ಅಸಹಕಾರ ತೋರಿಸುತ್ತಿದೆ ಎಂಬುದಾಗಿ, ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಹಿನ್ನೆಲೆಯಲ್ಲಿ ನಡೆದಿದ್ದ ಹೆಚ್.ಡಿಕೆ ಮತ್ತು ರಾಜ್ಯ ಸಚಿವ ಎಂ.ಬಿ.ಪಾಟೀಲ್ ಆರೋಪ ಪ್ರತ್ಯಾರೋಪದ ಮಾತನ ಸಮರದ (war of words) ಬೆನ್ನಲ್ಲೇ. ಇಂದು ಒಬ್ಬರು ಸಚಿವರು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ.
ಕರ್ನಾಟಕದ ಕೈಗಾರಿಕೆ ಸಚಿವರಾದ ಎಂ.ಬಿ.ಪಾಟೀಲ್ ಅವರು ನವದೆಹಲಿಯಲ್ಲಿ ಬುಧವಾರ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಎಂದು ಆಹ್ವಾನ ನೀಡಿದರು.
ನವದೆಹಲಿಯ ಉಕ್ಕು ಸಚಿವಾಲಯದಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಪಾಟೀಲ್ ಅವರು, ತಾವು ತಪ್ಪದೇ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಹಾಗೂ ಈ ನಿಟ್ಟಿನಲ್ಲಿ ತಮ್ಮ ಸಹಕಾರ ಅಗತ್ಯ ಬೇಕಿದೆ ಎಂದು ಅವರು ಕೋರಿದರು.

ಕರ್ನಾಟಕದ ಕೈಗಾರಿಕಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಇಲಾಖೆಯ ನಿರ್ದೇಶಕಿ ಗುಂಜನ್ ಕೃಷ್ಣ ಮತ್ತಿತರರು ಪಾಟೀಲ್ ಅವರ ನಿಯೋಗದಲ್ಲಿದ್ದರು.
ನನಗೆ ರಾಜ್ಯದಿಂದ ಯಾವ ಮನವಿಯೂ ಬಂದಿಲ್ಲ: ಕುಮಾರಸ್ವಾಮಿ
ಇದಕ್ಕೂ ಮುನ್ನ ಅಭಿವೃದ್ಧಿ ಬಗ್ಗೆ ನನಗೆ ರಾಜ್ಯದಿಂದ ಯಾವ ಮನವಿಯೂ ಬಂದಿಲ್ಲ ಎಂದು ಆರೋಪಿಸಿದ್ದ ಹೆಚ್‌ಡಿ ಕುಮಾರಸ್ವಾಮಿ, ಇವರು ಚಂದ್ರಬಾಬು ನಾಯ್ಡು ನೋಡಿ ಕಲಿಯಬೇಕು ಎಂದ ಹರಿಹಾಯ್ದಿದ್ದರು.
ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರವು ಕೇಂದ್ರ ಸರಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದರು.
ನವದೆಹಲಿಯ ಉಕ್ಕು ಸಚಿವಾಲಯದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು; ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನ ವಿಚಾರಕ್ಕೆ ರಾಜ್ಯ ಸರಕಾರ ತಮ್ಮ ಜತೆ ಚರ್ಚೆ ಮಾಡಿಲ್ಲ. ನನ್ನ ತವರು ರಾಜ್ಯ ಎನ್ನುವ ಕಾರಣಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಎಲ್ಲವನ್ನು ಜನರು ಗಮನಿಸುತ್ತಿದ್ದಾರೆ ಎಂದಿದ್ದರು.
ಕೇಂದ್ರ ಸರಕಾರಕ್ಕೆ ಕರ್ನಾಟಕ ಸರಕಾರ ಸಹಕಾರ ನೀಡುತ್ತಿಲ್ಲ, ಬದಲಿಗೆ ಪ್ರತಿನಿತ್ಯ ಪ್ರಧಾನಿಯನ್ನು ನಿಂದಿಸುವುದೇ ಆಗಿದೆ. ದಿನವೂ ಪ್ರಧಾನಿಯನ್ನು ನಿಂದಿಸಿದರೆ ರಾಜ್ಯ ಅಭಿವೃದ್ಧಿ ಆಗುತ್ತದೆಯೇ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದರು.
ನಾಯ್ಡು ಅವರನ್ನು ನೋಡಿ ಕಲಿಯಲಿ
ವೈಜಾಗ್ ಸ್ಟೀಲ್ ವಿಚಾರವಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅನೇಕ ಸಲ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅನೇಕ ಸಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು.
ಅವರ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆಷ್ಟು ಬದ್ಧತೆ ಇದೆ ಎಂಬುದನ್ನು ನೋಡಿ ಇವರು ಕಲಿಯಬೇಕು. ರಾಜಕೀಯ ದ್ವೇಷ ಕಾರಣಕ್ಕೆ ರಾಜ್ಯದಲ್ಲಿ ನಾನು ಏನೇ ಮಾಡಲು ಹೋದರೂ ರಾಜ್ಯ ಸರಕಾರ ಅಡ್ಡಿಪಡಿಸುವುದನ್ನೇ ಪರಿಪಾಠ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದ್ದರು.
ರಾಜ್ಯದಿಂದ ಯಾವ ಮನವಿಯೂ ಬಂದಿಲ್ಲ
ಕರ್ನಾಟಕ ಸರಕಾರ ಈ ಕ್ಷಣದವರೆಗೆ ನಾನು ತೆಗೆದುಕೊಳ್ಳುವ ವಿಚಾರವಾಗಿ ಎಷ್ಟು ಆಡಚಣೆ ಮಾಡುತ್ತಿದ್ದಿರಿ ಎಂದು ನೀವೇ ನೋಡುತ್ತಿದ್ದಿರಿ ಎಂದು ಮಾಧ್ಯಮ ವರದಿಗಾರರಿಗೆ ಹೇಳಿದ ಅವರು; ಈ ತನಕ ಕರ್ನಾಟಕದಿಂದ ಒಂದೇ ಒಂದು ಪತ್ರ ಬಂದಿಲ್ಲ. ಏಳು ತಿಂಗಳು ಕಳೆದರೂ ನನ್ನನ್ನು ಯಾರು ಭೇಟಿಯಾಗಿಲ್ಲ.
ನೀವು ಕುದುರೆಮುಖ ಕಂಪನಿಯ ವಿಚಾರದಲ್ಲಿ ರಾಜ್ಯ ಸರಕಾರ ಕೊಟ್ಟ ಕಿರುಕುಳವನ್ನು ನೋಡಿ. ರಾಜ್ಯ ಸರಕಾರ ಕನಿಷ್ಠ ಸೌಜನ್ಯಕ್ಕೆ ಪತ್ರ ಬರೆಯಲಿಲ್ಲ. ಆ ಕಂಪನಿ ಮುಚ್ಚುವ ಹಂತಕ್ಕೆ ಬಂದಿದೆ. ರಾಜ್ಯ ಸರಕಾರದ ತಪ್ಪಿಗೆ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು.
ಕುದುರೆಮುಖ ಕಂಪನಿಗೆ ಗಣಿ ಇಲ್ಲ ಎನ್ನುವ ಕಾರಣಕ್ಕೆ ದೇವದಾರಿ ಗಣಿ ಯೋಜನೆಗೆ ಹಣಕಾಸು ಅನುಮೋದನೆಗೆ ನಾನು ಹಸಿರು ನಿಶಾನೆ ನೀಡಿದ್ದೆ. ನಾನು ಉಕ್ಕು ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಮೊತ್ತ ಮೊದಲಿಗೆ ಹಾಕಿದ ಸಹಿ ಅದು. ನಾನೇ ಗಣಿಗಾರಿಕೆಗೆ ಒಪ್ಪಿಗೆ ಕೊಟ್ಟೆ ಎಂದು ರಾಜ್ಯ ಸರಕಾರ ಅಪಪ್ರಚಾರ ಮಾಡಿತು.
ನಿಜಕ್ಕಾದರೆ ದೇವದಾರಿಗೆ ಒಪ್ಪಿಗೆ ನೀಡಿದ್ದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಕೊನೆಗೆ ನಾನು ಉಕ್ಕು ಸಚಿವ ಎನ್ನುವ ಕಾರಣಕ್ಕೆ ಅವರೇ ಕಿರುಕುಳ ನೀಡುತ್ತಿದ್ದಾರೆ. ಹೀಗಾದರೆ ರಾಜ್ಯ ಅಭಿವೃದ್ಧಿ ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದರು.
ಹೀಗಾದರೆ ಕುದುರೆಮುಖ (ಕೆಐಒಸಿಎಲ್) ಹೇಗೆ ಉಳಿಯುತ್ತದೆ. ವೈಜಾಗ್ ಸ್ಟೀಲ್ ನಂತೆ ಮಂಗಳೂರು ಸಮುದ್ರ ದಂಡೆಯಲ್ಲಿರುವ ಕಾರ್ಖಾನೆ ಸಂಕಷ್ಟದಲ್ಲಿದೆ.
ಹೇಗಾದರೂ ಅದನ್ನು ಉಳಿಸಬೇಕು ಎನ್ನುವ ಕಾರಣಕ್ಕೆ ನಾನು ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC) ದಲ್ಲಿ ವಿಲೀನ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದ ಅವರು; ಕಾಂಗ್ರೆಸ್ ನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ರಾಜ್ಯವನ್ನು ಲೂಟಿ ಮಾಡಲಿಕ್ಕೆ ಎಂದು ಕಿಡಿಕಾರಿದ್ದರು.
ಇನ್ನು ರಾಜ್ಯವಷ್ಟೇ ಅಲ್ಲ , ಇಡೀ ದೇಶದ ಹೆಮ್ಮೆಯ ಕಂಪನಿ ಆಗಿದ್ದ ಹೆಚ್ ಎಮ್ ಟಿ ಬಗ್ಗೆ ರಾಜ್ಯ ಸರಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿ. ಈಗ ಹೆಚ್ ಎಮ್ ಟಿ ಜಾಗ ಹೊಡೆಯಲು ಹೊರಟ್ಟಿದ್ದಾರೆ? ಆರಂಭದಲ್ಲಿಯೇ ಕಂಪನಿ ಮೈಸೂರು ಮಹಾರಾಜರಿಂದ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಅದಕ್ಕೆ ದಾಖಲೆಗಳು ಇವೆ. ಆ ಕಂಪನಿಗೆ ಜೀವದಾನ ಮಾಡಲು ಹೊರಟರೆ ಅದಕ್ಕೂ ರಾಜ್ಯ ಸರಕಾರ ಕೊಕ್ಕೆ ಹಾಕಲು ಬರುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದರು.
ಈಗ ಹೆಚ್ ಎಂಟಿ ಕಾರ್ಖಾನೆಯ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆ ರಾಜ್ಯ ಸರಕಾರ ಹೇಳಿಕೆ ನೀಡುತ್ತಿದೆ. ಹಾಗಾದರೆ, ಈ ಮೊದಲೇ ಪರಭಾರೆ ಆಗಿರುವ ಎಲ್ಲಾ ಸ್ವತ್ತುಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಿ.
ಕಾರ್ಖಾನೆಯ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡ ಒತ್ತಿಕೊಂಡಿರುವವರ ಹಿಂದೆ ಯಾರ ಕೈವಾಡ ಇದೆ ಎಂಬುದು ಗೊತ್ತಿದೆ. ಎಲ್ಲವನ್ನು ಜನರ ಮುಂದೆ ಇರಿಸಲಾಗುವುದು ಎಂದು ಅವರು ಹೇಳಿದ್ದರು.
ಕುಮಾರಸ್ವಾಮಿ ಆರೋಪ ನಿರಾಧಾರ: ಎಂ.ಬಿ ಪಾಟೀಲ ತಿರುಗೇಟು
ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ನಾನು ನಮ್ಮ ಉನ್ನತ ಅಧಿಕಾರಿಗಳೊಂದಿಗೆ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ, ಸೆಮಿಕಂಡಕ್ಟರ್ ಸೇರಿದಂತೆ ಕೈಗಾರಿಕಾ ವಲಯದ ಹಲವು ಬೇಡಿಕೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ.
ಆ ಸಂದರ್ಭದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನೂ ಭೇಟಿಯಾಗಿದ್ದೆ. ಹೀಗಾಗಿ ರಾಜ್ಯ ಸರ್ಕಾರ ಅಸಹಕಾರ ತೋರಿಸುತ್ತಿದೆ ಎನ್ನುವುದು ಸರಿಯಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿರುಗೇಟು ನೀಡಿದ್ದರು.
` ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಇವರನ್ನೆಲ್ಲ ಆಹ್ವಾನಿಸಲು ಸದ್ಯದಲ್ಲೇ ನಾನು ದೆಹಲಿಗೆ ಹೋಗುತ್ತಿದ್ದೇನೆ. ಆಗಲೂ ಇದನ್ನೆಲ್ಲ ದಾಖಲೆಗಳ ಸಮೇತ ಕುಮಾರಸ್ವಾಮಿಗೆ ನೆನಪಿಸಲಾಗುವುದು. ನಿರ್ಮಲಾ ಸೀತಾರಾಮನ್ ಮತ್ತು ರಾಜನಾಥ್ ಸಿಂಗ್ ಬಳಿ ಕೂಡ ನಾನು ಹಿಂದೆ ಭೇಟಿಯಾಗಿದ್ದಾಗ ರಾಜ್ಯದ ಬೇಡಿಕೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದೆ’ ಎಂದಿದ್ದಾರೆ.
ಕುಮಾರಸ್ವಾಮಿ ಕೂಡ ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಕೂಡ ಒಂದು ಹೆಜ್ಜೆ ಮುಂದೆ ಬಂದು ನಮ್ಮ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕು. ರಾಜ್ಯಕ್ಕೆ ಉದ್ದಿಮೆಗಳನ್ನು ತಂದರೆ ಅವರಿಗೂ ಒಳ್ಳೆಯ ಹೆಸರು ಬರುತ್ತದೆ.
ಹಿಂದೆ ಭೇಟಿಯಾಗಿದ್ದಾಗ ಸೆಮಿಕಂಡಕ್ಟರ್ ಉದ್ದಿಮೆಗಳು ಮೊದಲು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದರೂ ಕೊನೆಗೆ ಗುಜರಾತಿಗೆ ಹೋಗುತ್ತಿರುವ ವಿದ್ಯಮಾನದ ಬಗ್ಗೆ ಚರ್ಚಿಸಿದ್ದೆ. ಇದರಲ್ಲಿ ವೈಯಕ್ತಿಕ ಪ್ರತಿಷ್ಠೆ ಇರಬಾರದು ಎಂದು ಅವರು ನುಡಿದಿದ್ದಾರೆ.
ನಾವು ಹಿಂದೆ ಏನೇನು ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದೆವು ಎನ್ನುವ ವಿವರ ನಮ್ಮ ಬಳಿ ಇದೆ. ಆಗಿನ ಭೇಟಿಯಲ್ಲಿ ನಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಆಯುಕ್ತರು ಕೂಡ ಇದ್ದರು. ಕೈಗಾರಿಕಾ ಸಚಿವನಾಗಿ ನಾನು ಅವರ ಬಳಿ ಹೋಗಿದ್ದೆ. ಇದರಲ್ಲಿ ನನ್ನದು ಅನ್ನುವ ಸ್ವಾರ್ಥವೇನೂ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.