ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಕೊಡಿಗೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮಸ್ಯೆಗಳ ಆಗರವೇ ಸೃಷ್ಟಿಯಾಗಿದ್ದು, ಕೂಡಲೇ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ, ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆಯ ಮುಖಂಡರು, ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಂತಿದೆ. ಆದರೆ ಇಲ್ಲಿನ ಜನರ ಸಮಸ್ಯೆಗಳನ್ನು ಕೇಳುವವರೇ ಇಲ್ಲವಾಗಿದೆ.
ಅಸಮರ್ಪಕ ನೀರಿನ ಪೂರೈಕೆಯಿಂದಾಗಿ ಅನಿವಾರ್ಯವಾಗಿ ದುಡ್ಡುಕೊಟ್ಟು ನೀರು ಪೂರೈಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ. ಇದರಲ್ಲಿ ಟ್ಯಾಂಕರ್ ಮಾಫಿಯಾದೊಂದಿಗೆ ಪಂಚಾಯಿತಿ ಅಧಿಕಾರಿಗಳು, ವಾಟರ್ ಮೆನ್ಗಳು ಶಾಮಿಲಾಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.
ಅಲ್ಲದೆ ಪಾಲನಜೋಗಳ್ಳಿಯ ಹಾಲಿನ ಡೈರಿ ರಸ್ತೆಗೆ ಚರಂಡಿ ನೀರು ಹಾದು ಹೋಗುತ್ತಿದ್ದು, ಇದನ್ನು ಸರಿಪಡಿಸಲು ಗ್ರಾಮಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಈ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಎರಡು ಕಾಲೇಜುಗಳಿದ್ದು, ಪ್ರತಿನಿತ್ಯ ಸಾರ್ವಜನಿಕರು ಹಾಗೂ ಕಾಲೇಜಿನ ನೂರಾರು ಮಕ್ಕಳು ಓಡಾಡುತ್ತಾರೆ. ಆದರೆ ಮುಖ್ಯರಸ್ತೆಯಲ್ಲಿಯೇ ಚರಂಡಿಯ ತ್ಯಾಜ್ಯ ನೀರು ಹರಿದು ಹೋಗುತ್ತಿದ್ದು ಮೂಗುಮುಚ್ಚಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ ಇದೆನಾ ಪಂಚಾಯಿತಿ ಅಧಿಕಾರಿಗಳು ಸ್ವಚ್ಛ ಭಾರತ ಯೋಜನೆ ಪಾಲಿಸುವುದು ಎಂದು ಕಿಡಿಕಾರಿದರು.
ಪಾಲನಜೋಗಳ್ಳಿಯಲ್ಲಿ ನಾಲ್ಕು ವರ್ಷಗಳ ಹಿಂದೆ ಕುಡಿಯುವ ನೀರಿನ ಘಟಕ ಪ್ರಾರಂಭವಾಗಿದ್ದು, ಸುಮಾರು ಒಂದು ವರ್ಷದಿಂದ ಘಟಕ ದುರಸ್ತಿ ಕಾರಣ ಸ್ಥಗಿತವಾಗಿದೆ. ಆದರೆ ಇದನ್ನು ಗಮನ ಹರಿಸುವವರೇ ಇಲ್ಲವಾಗಿದೆ. ಇದರಿಂದಾಗಿ ಈ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.
ವಿಪರ್ಯಾಸವೆಂದರೆ ಕೆಲ ಮನೆಗಳಿಗೆ ಪೂರೈಕೆಯಾಗುವ ನೀರಿನಲ್ಲಿ ಚರಂಡಿ ನೀರು ಸಹ ಬಂದಿರುತ್ತದೆ. ಆದಾಗ್ಯೂ ಇದರ ಬಗ್ಗೆ ಯಾರೂ ಗಮನ ಕೊಡದೇ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಅಲ್ಲದೆ ಮನೆ ಮನೆಗೆ ಗಂಗೆ ಹೆಸರಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೊಳಾಯಿ ಅಳವಡಿಸಲು ಅಗೆದ ಕಾರಣ ಚೆನ್ನಾಗಿದ್ದ ರಸ್ತೆ.. ಕೊಳಾಯಿಗಳಲ್ಲಿ ನೀರು ಬಾರದೆ ಇದ್ದರು ರಸ್ತೆ ಮಾತ್ರ ಗುಂಡಿಬಿದ್ದು ಹಾಳಾಗಿದೆ.
ಈ ರೀತಿ ಕೊಡಿಗೇಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸಮಸ್ಯೆಗಳು ಮಿತಿಮೀರಿದ್ದು ಕೂಡಲೇ ಅಧಿಕಾರಿಗಳು, ಜನಪ್ರತಿನಿದಿಗಳು ಹೆಚ್ಚೆತ್ತು ಇಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕಿದೆ.. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯತೆ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳಾದ ಎಸ್ಎಲ್ಎನ್ ವೇಣು, ಉಪಾಧ್ಯಕ್ಷ ಜೋಗಹಳ್ಳಿ ಅಮ್ಮು, ನಗರ ಅಧ್ಯಕ್ಷ ಶ್ರೀನಗರ ಬಶೀರ್, ಮುಖಂಡರಾದ ಮುನಿಕೃಷ್ಣ, ಪ್ರಕಾಶ, ಸಜೆಶನ್ ಮತ್ತಿತರರಿದ್ದರು.