ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (Sukri Bommagowda) ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಸುಕ್ರಜ್ಜಿ ಎಂದು ಪ್ರಸಿದ್ದರಾಗಿದ್ದ ಅವರು, ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ.
ಇನ್ನೂ ಸುಕ್ರಜ್ಜಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಪ್ರಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಅವರೊಬ್ಬರು ಹುಟ್ಟು ಕಲಾವಿದೆ.
ಹಾಲಕ್ಕಿ ಜಾನಪದ ಹಾಡುಗಳ ಮೂಲಕವೇ ಲೋಕಪ್ರಸಿದ್ಧರಾಗಿದ್ದ “ಸುಕ್ರಜ್ಜಿ” ಅವರಿಗೆ ಸಂಗೀತವೇ ಬದುಕಾಗಿತ್ತು. ಸಂಗೀತದ ಜೊತೆಯಲ್ಲಿ ಮಧ್ಯಪಾನ ವಿರೋಧಿ ಆಂದೋಲನದಲ್ಲಿಯೂ ಸಕ್ರಿಯರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ಬದುಕು ಮತ್ತು ಸಾಧನೆ ಆದರ್ಶಪ್ರಾಯವಾದುದು.
ಸಂಗೀತ ಕಲಾಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದ ಸುಕ್ರಜ್ಜಿ ಅವರು ಹಂಪಿ ವಿಶ್ವವಿದ್ಯಾಲಯ ನೀಡುವ ನಾಡೋಜ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.
ಸುಕ್ರಿ ಬೊಮ್ಮಗೌಡ ಅವರನ್ನು ಕಳೆದುಕೊಂಡಿರುವ ಬಂಧು ಮಿತ್ರರ ದು:ಖದಲ್ಲಿ ನಾನೂ ಪಾಲ್ಗೊಂಡಿದ್ದೇನೆ ಎಂದಿದ್ದಾರೆ.
ಬುಡಕಟ್ಟು ಜನಾಂಗವಾದ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ತಮಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಜನಪದ ಕೋಗಿಲೆ ಸುಕ್ರಿ ಬೊಮ್ಮಗೌಡ ನಿರ್ಧರಿಸಿದ್ದರು.
ತಮ್ಮ ಜನಾಂಗದ ಹಕ್ಕಿಗಾಗಿ ವಿಧಾನಸೌಧದಲ್ಲಿ ಪ್ರತಿಭಟನೆ ಕೂರುವ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಇದೀಗ ಹಾಲಕ್ಕಿ ಸಮುದಾಯ ತುಳಸಿ ಗೌಡ ಬೆನ್ನಲ್ಲೇ ಇದೀಗ ಸುಕ್ರಿ ಬೊಮ್ಮಗೌಡ ಅವರನ್ನೂ ಸಹ ಕಳೆದುಕೊಂಡಿದೆ.