ಬೆಳಗಾವಿ: ಕನ್ನಡ ಮಾತಾಡು ಅಂದಿದ್ದಕ್ಕೆ ರಾಜ್ಯ ರಸ್ತೆ ಸಾರಿಗೆ ಆ ಸಂಸ್ಥೆಯ ನಿರ್ವಾಹಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆಲ ಮರಾಠಿ ಭಾಷಿಕ ಪುಂಡರು ಹಲ್ಲೆ (Attack) ಮಾಡಿದ ಘಟನೆ ಬೆಳಗಾವಿ ತಾಲೂಕಿನಲ್ಲಿ ನಡೆದಿದೆ. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಚಲಿಸುತ್ತಿದ್ದ ಬಸ್ ನಿಲ್ಲಿಸಿ ನಿರ್ವಾಹಕ ಮಹಾದೇವ್ ಹುಕ್ಕೇರಿ ಮೇಲೆ 20ಕ್ಕೂ ಹೆಚ್ಚಿದ್ದ ಪುಂಡರ ಗುಂಪು ಹಲ್ಲೆ ಮಾಡಿದೆ. ಬಸ್‌ನಲ್ಲಿದ್ದ ಯುವತಿ ಎರಡು ಟಿಕೆಟ್ ಕೊಡು ಎಂದು ಮರಾಠಿಯಲ್ಲಿ ಕೇಳಿದಾಗ ನಿರ್ವಾಹಕ ನನಗೆ ಮರಾಠಿ ಬರಲ್ಲ ಕನ್ನಡದಲ್ಲಿ ಹೇಳಿ ಎಂದಿದ್ದಾರೆ.
ಕಂಡಕ್ಟರ್ ಮರಾಠಿ ಬರಲ್ಲ ಎನ್ನುತ್ತಿದ್ದಂತೆ ಚಲಿಸುತ್ತಿದ್ದ ಬಸ್ ನಿಲ್ಲಿಸಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದವರು ಪಂತಬಾಳೆಕುಂದ್ರಿ ಗ್ರಾಮದವರು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಹಲ್ಲೆಗೊಳಗಾದ ಮಹಾದೇವ್ ಮಾರಿಹಾಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಕನ್ನಡದ ನೆಲದಲ್ಲಿಯೇ ಕನ್ನಡ ಮಾತಾಡು ಎಂದಿದ್ದಕ್ಕೆ ಹಲ್ಲೆ ಮಾಡಿರುವುದನ್ನು ಕನ್ನಡಪರ ಸಂಘಟನೆಗಳು ಖಂಡಿಸಿವೆ. ಅಷ್ಟೇ ಅಲ್ಲ ಹಲ್ಲೆ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಕನ್ನಡಿಗರು ಒತ್ತಾಯಿಸಿದ್ದಾರೆ.
ತಕ್ಕ ಉತ್ತರದ ಎಚ್ಚರಿಕೆ
ನಿರ್ವಾಹಕನ ಮೇಲೆ ಹಲ್ಲೆ ಮಾಡಿದ ಪುಂಡರ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವ ಕೆಲಸವನ್ನು ಪೊಲೀಸರು ಮಾಡಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಇಲ್ಲದಿದ್ದರೆ ಕನ್ನಡಿಗರೇ ಕಾನೂನನ್ನು ಕೈಗೆತ್ತಿಕೊಂಡು ಅವರಿಗೆ ಅದೇ ಶೈಲಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಸಿವೆ.