ಬೆಂಗಳೂರು: ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಬಹುತೇಕ ಆರೋಪಿಗಳು ಇಂದು ನಗರದ 57ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳು ಜಾಮೀನು ಪಡೆದಿದ್ದು, ಪ್ರತಿ ತಿಂಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಬಹುತೇಕ ಎಲ್ಲರೂ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಮುಂದಿನ ವಿಚಾರಣೆಯನ್ನ ಏಪ್ರಿಲ್ 8ಕ್ಕೆ ಮುಂದೂಡಲಾಯಿತು.
ಮಾಫಿ ಸಾಕ್ಷಿಯಾಗುವಂತೆ ಬೆದರಿಕೆ
ಪ್ರಕರಣದ ಕೆಲವು ಆರೋಪಿಗಳಿಗೆ ಮಾಫಿ ಸಾಕ್ಷಿಯಾಗುವಂತೆ ಬೆದರಿಸಲಾಗುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿರುವುದಾಗಿ ದರ್ಶನ್ ಅವರ ಪರ ವಕೀಲ ಸುನೀಲ್ ತಿಳಿಸಿದರು.
ಕೆಲವು ಆರೋಪಿಗಳಿಗೆ ಪೊಲೀಸರು, ವಕೀಲರ ಹೆಸರಿನಲ್ಲಿ ಸಂಪರ್ಕಿಸಿ ಪ್ರಕರಣದಲ್ಲಿ ದರ್ಶನ್ ಹೆಸರು ಉಲ್ಲೇಖಿಸಿ ಮಾಫಿ ಸಾಕ್ಷಿಯಾಗುವಂತೆ ಬೆದರಿಸಲಾಗುತ್ತಿದೆ. ಅದರ ಕುರಿತು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.
ಈ ಕುರಿತು ಅರ್ಜಿ ಸಲ್ಲಿಸುವಂತೆ ನ್ಯಾಯಾದೀಶರು ತಿಳಿಸಿದ್ದು, ಅದರಂತೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದರು.