ದೊಡ್ಡಬಳ್ಳಾಪುರ (Doddaballapura): ನಗರದ ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಮೌಲ್ಯಮಾಪನ ನಡೆಸಿದ್ದ ರಾಷ್ಟೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯ (ನ್ಯಾಕ್) ತಂಡ, ತಮ್ಮ ವರದಿ ನೀಡಿದ್ದು, ಕಾಲೇಜು ಬಿ ಶ್ರೇಣಿ ಪಡೆದು ಯಥಾವತ್ತಾಗಿ ತನ್ನ ಗುಣಮಟ್ಟ ಉಳಿಸಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಸದಾಶಿವ ರಾಮಚಂದ್ರ ಗೌಡ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಫೆಬ್ರವರಿ 19 ಮತ್ತು 20 ರಂದು ನ್ಯಾಕ್ ವತಿಯಿಂದ ತೆಲಂಗಾಣ ರಾಜ್ಯದ ಕಾಕತಿಯ ವಿಶ್ವವಿದ್ಯಾಲಯದ ಆಂಗ್ಲ ಪ್ರಾಧ್ಯಾಪಕ ರಾಜೇಶ್ವರ ಮಿತ್ತಪಲ್ಲಿ, ದಿಲ್ಲಿಯ ಎನ್‌ಸಿಇಆರ್‌ಟಿ ಪ್ರಾಧ್ಯಾಪಕ ಡಾ.ದಿನೇಶ್ ಕುಮಾರ, ಕೇರಳ ರಾಜ್ಯದ ಕೊಟ್ಟಾಯಂ ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕ ಪ್ರೊ.ಸುಲೈಮಾನ್ ಅವರನ್ನೊಳಗೊಂಡ ಮೂರು ಸದಸ್ಯರ ನಿಯೋಗವೊಂದು ಕಾಲೇಜಿಗೆ ಭೇಟಿ ನೀಡಿ, ಇಲ್ಲಿನ ಎಲ್ಲಾ ವಿಭಾಗಗಳನ್ನೂ, ಪೋಷಕರು, ಹಿರಿಯ ವಿದ್ಯಾರ್ಥಿ ಬಳಗದವರೊಂದಿಗೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿ ಮೌಲ್ಯ ಮಾಪನಕ್ಕೊಳಪಡಿಸಿತ್ತು.
ಕಾಲೇಜಿನ ಮೂಲ ಸೌಕರ‍್ಯಗಳು, ಬೋಧನಾ ವ್ಯವಸ್ಥೆಗಳನ್ನು ಸಹ ಪರಿಶೀಲನೆ ನಡೆಸಿತ್ತು. ಇದರ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿಗೆ ‘ಬಿ’ ಗ್ರೇಡ್ ಲಭಿಸಿದೆ.
ಕಳೆದ ಮೂರು ಅವಧಿಗಳಿಂದಲೂ ಬಿ ಗ್ರೇಡ್ ಪಡೆದಿದ್ದು, ಈ ನಾಲ್ಕನೆ ಬಾರಿಯೂ ಬಿ ಗ್ರೇಡ್ ಪಡೆದು ತನ್ನ ಗುಣಮಟ್ಟವನ್ನು ಯಥಾವತ್ತಾಗಿ ಉಳಿಸಿ ಕೊಂಡಿದೆ ಎಂದು ತಿಳಿಸಿದರು.
ಈ ನ್ಯಾಕ್ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಲೇಜಿಗೆ ಸಮಾಧಾನಕರ ಗ್ರೇಡ್ ಬರುವಲ್ಲಿ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿ ಬಳಗ, ಪೋಷಕ ವರ್ಗ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಜಂಟಿ ನಿರ್ದೇಶಕರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಸದಾಶಿವ ರಾಮಚಂದ್ರ ಗೌಡ ಮತ್ತು ಐಕ್ಯೂಎಸಿ ಸಂಯೋಜಕರಾದ ಪ್ರೊ. ಗಂಗಾಧರಯ್ಯ ಬಿ.ಆರ್.ಅಭಿನಂದಿಸಿದ್ದಾರೆ.