ಬೆಂಗಳೂರು: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ರಾಜ್ಯಪಾಲರಾದ (Governor) ಥಾವರ್ ಚಂದ್ ಗೆಹ್ಲೊಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದಾರೆ.
ರಾಜ್ಯ ಸರ್ಕಾರ ರಾಜ್ಯಪಾಲರು ಮತ್ತು ರಾಜಭವನವನ್ನು ಅವಮಾನಿಸುತ್ತಿದೆ ಎಂದು ಬಿಜೆಪಿ ಶಾಸಕರ ಭವನದ ಮುಂಭಾಗ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಆದರೆ ಇತ್ತ ವಿಧಾನಸಭೆ ಕಲಾಪದಲ್ಲಿ ರಾಜ್ಯ ಪಾಲರು ಕಾಂಗ್ರೆಸ್ ಸರ್ಕಾರವನ್ನು ಹಾಡಿಹೊಗಳುವ ಮೂಲಕ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ..

ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಮಾತನಾಡಿರುವ ರಾಜ್ಯಪಾಲರು ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದ್ದಾರೆ. ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ರಾಜ್ಯ ಹಿಂದೆ ಬೀಳುತ್ತದೆ ಎಂಬ ಕೆಲವರ ಭವಿಷ್ಯ ಸುಳ್ಳಾಗಿದೆ ಎಂದು ಸರ್ಕಾರ ಸಾಬೀತು ಮಾಡಿದೆ..
ರಾಜ್ಯದ ಆದಾಯ ಹೆಚ್ಚುತ್ತಿದ್ದು, ಖಾಸಗಿ ಬಂಡವಾಳ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಕಲ್ಯಾಣ ಕಾರ್ಯಕ್ರಮಗಳಿಂದಾಗಿ ಅಸಮಾನತೆ ಕಡಿಮೆಯಾಗುತ್ತಿದೆ ಎಂದವರು ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ.
ಜಿಎಸ್‌ಟಿ ಸಂಗ್ರಹಣೆಯಲ್ಲಿಯೂ ಉತ್ತಮ ಪ್ರಗತಿ ಕಂಡಿದೆ. 2024-25ನೇ ಸಾಲಿನಲ್ಲಿ ಘೋಷಿಸಲಾದ 344 ಯೋಜನೆಗಳ ಪೈಕಿ 331 ಯೋಜನೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಉತ್ತಮ ಫಸಲು ಪಡೆದಿದ್ದಾರೆ. ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ ಎಂದರು. ಹಾಲಿನ ಉತ್ಪಾದನೆಯಲ್ಲಿ ಕರ್ನಾಟಕ ದಾಖಲೆ ಬರೆದಿದ್ದು, ಕೆಎಂಎಫ್ ದಿನವೊಂದಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಪಶುಪಾಲಕರಿಗೆ ಸರ್ಕಾರ 1500 ಕೋಟಿ ರೂಪಾಯಿ ಪ್ರೋತ್ಸಾಹಧನ ನೀಡಿದೆ ಎಂದು ಹೇಳಿದರು.
ಸರ್ಕಾರ ಆಡಳಿತದಲ್ಲಿ ಪಾರದರ್ಶಕತೆ ತರಲು ಕ್ರಮ ಕೈಗೊಂಡಿದ್ದು, ಕೆಲವು ಇಲಾಖೆಗಳಲ್ಲಿ ನೌಕರರ ವರ್ಗಾವಣೆಗೆ ಕೌನ್ಸಲಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಅಂತಿಮ ಹಂತದಲ್ಲಿದೆ ಎಂದು ರಾಜ್ಯಪಾಲರು ಹೇಳಿದರು.
ಹೊಸ ಉದ್ಯೋಗಾವಕಾಶ
ಬೆಂಗಳೂರಿನಲ್ಲಿ ಹೊಸ ಉದ್ಯೋಗಾವಕಾಶ ಸೃಷ್ಟಿಗೆ ಒತ್ತು ನೀಡಲಾಗುತ್ತಿದ್ದು, ನೇಕಾರರಿಗೆ ಸಹಾಯಧನ ನೀಡಲಾಗುತ್ತಿದೆ. ಪಶುಪಾಲಕರ ನೆರವಿಗೆ ಅನುಗ್ರಹ ಯೋಜನೆ ಮುಂದುವರೆಸಲಾಗಿದ್ದು, ಮೃತಪಟ್ಟ ರಾಸುಗಳಿಗೆ ಪರಿಹಾರ ನೀಡಲಾಗಿದೆ.
ಸಂವಿಧಾನದ ಆಶಯದಂತೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕಾಗಿ ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗುತ್ತಿದೆ. ಈವರೆಗೆ 5 ಗ್ಯಾರಂಟಿ ಯೋಜನೆಗಳಿಗಾಗಿ 70000 ಕೋಟಿ ರೂಪಾಯಿಗಳನ್ನು ಜನರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಕಲ್ಯಾಣ ಕಾರ್ಯಕ್ರಮಗಳಿಗಾಗಿ ವರ್ಷಕ್ಕೆ 90 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ.
ಬೆಂಗಳೂರಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಹೊಸ ಉದ್ಯಾನವನ ನಿರ್ಮಿಸಲಾಗುತ್ತಿದೆ. ಯುವನಿಧಿ ಯೋಜನೆಯಡಿ 1,65,014 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲಾಗಿದೆ.
ಪ್ರಾದೇಶಿಕ ಅಸಮಾನತೆ ತೊಡೆಯಲು ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದ್ದು, 37662 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಗೋವಿಂದರಾವ್ ಸಮಿತಿ ರಚಿಸಲಾಗಿದೆ.
ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಯಶಸ್ವಿಯಾಗಿದ್ದು, 10.27 ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ಒಡಂಬಡಿಕೆ ಆಗಿದೆ. ಬೆಂಗಳೂರು ಹೊರಗೆ ಹೂಡಿಕೆಗೆ ಒತ್ತು ನೀಡಲಾಗುತ್ತಿದೆ.
ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪುವ ಗುರಿಯತ್ತ ಸಾಗುತ್ತಿದ್ದು, ವಿತ್ತೀಯ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಶಿಕ್ಷಕರ ನೇಮಕಾತಿ ಮತ್ತು ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಎಂದು ಸರ್ಕಾರದ ಹತ್ತಾರು ಯೋಜನೆಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ.