ದೊಡ್ಡಬಳ್ಳಾಪುರ: ಕಳೆದ ವರ್ಷ ಬೇಸಿಗೆಯಲ್ಲಿ ತಾಲೂಕಿನ ಜನರಿಗೆ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬರಲಿಲ್ಲ. ಅಂತೆಯೇ ಈ ವರ್ಷದ ಬೇಸಿಗೆಯಲ್ಲಿ ತಾಲೂಕಿನಲ್ಲಿ ಉಂಟಾಗಬಹುದಾದ ನೀರಿನ ಸಮಸ್ಯೆ ಬಗೆಹರಿಸಲು ತಾಲೂಕು ಪಂಚಾಯಿತಿ ಸಲಹೆಯ ಮೇರೆಗೆ ಗ್ರಾಮಪಂಚಾಯಿತಿಗಳು ಅಗತ್ಯ ಕ್ರಮಗಳನ್ನು ಕೈಗೊಂಡಿವೆ ಎಂದು ಇಒ ಮುನಿರಾಜು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲೂಕಿನ 16 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳಬಹುದು ಎಂದು ಪಟ್ಟಿಮಾಡಲಾಗಿದೆ.
ಈ ಗ್ರಾಮಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ಕ್ರಮಗಳ ಮೂಲಕ ಯಾವ ರೀತಿ ನೀರು ಪೂರೈಕೆ ಮಾಡಬಹುದು ಎಂಬುದನ್ನು ಆಯಾ ವ್ಯಾಪ್ತಿಯ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ.
ಜೆಜೆಎಂ ವರದಾನ
ಜಲಜೀವನ್ ಮಿಷನ್ ಯೋಜನೆಯಡಿ ಕೊರೆಸಲಾಗಿರುವ ಬೋರ್‌ವೆಲ್ ಗಳು ನೀರಿನ ಸಮಸ್ಯೆ ಉಂಟಾಗದಂತೆ ತಡೆಯಲು ಗ್ರಾಮ ಪಂಚಾಯಿತಿಗಳಿಗೆ ವರದಾನವಾಗಿದೆ.
ಯಾವುದಾದರು ಊರಿನಲ್ಲಿ ಸಮಸ್ಯೆ ಎದಯರಾದರೆ ಜೆಜೆಎಮ್ ಯೋಜನೆಯ ಬೋರ್ವೆಲ್ ಗಳಿಗೆ ಪಂಪ್, ಮೋಟಾರ್ ಅಳವಡಿಸಿ ತಕ್ಷಣ ನೀರಿನ ಪೂರೈಕೆ ಮಾಡಲು ಅಗತ್ಯ ಸಿದ್ಧತೆ ನಡೆಸಲಾಗಿದೆ.
ನಿರ್ವಹಣೆ ಕೊರತೆ
ಉಳಿದಂತೆ ಕೆಲ ಗ್ರಾಮಗಳಲ್ಲಿ ನಿರ್ವಹಣೆ ಕೊರತೆಯಿಂದ ಸಾರ್ವಜನಿಕರು ನೀರಿನ ಸಮಸ್ಯೆಗೆ ಒಳಗಾಗುತ್ತಿರುವ ದೂರುಗಳು ಕೇಳಿ ಬಂದಿದ್ದು, ಪಿಡಿಒಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಇಒ ಮುನಿರಾಜು ಭರವಸೆ ನೀಡಿದ್ದಾರೆ.