ದೊಡ್ಡಬಳ್ಳಾಪುರ (terraforma): ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ತೊಂದರೆಗೆ ಒಳಗಾಗಿರುವ ಗ್ರಾಮಗಳಲ್ಲಿ, ಹಲವರ ಪಾಪದ ಕೂಸಾಗಿ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಒಕ್ಕರಿಸಿರುವ ಬಿಬಿಎಂಪಿ ತಾಲೂಕಿನ ಜನರ ಆಶಯದ ವಿರುದ್ಧ ಮತ್ತೊಂದು ಆತಂಕಕಾರಿ ನಿರ್ಣಯ ಕೈಗೊಂಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಒಂದು ಸಾವಿರ ಟನ್ ತ್ಯಾಜ್ಯ ಸಂಸ್ಕರಣೆಯಾಗುತ್ತಿದ್ದು, ಪ್ರತಿದಿನ ಸುಮಾರು 2,500 ಟನ್ ಮಿಶ್ರತ್ಯಾಜ್ಯ ಭೂಭರ್ತಿಯಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಆಘಾತಕಾರಿಯಾಗಿ 100 ಎಕರೆ ಜಾಗವನ್ನು ದೊಡ್ಡಬಳ್ಳಾಪುರದ ಟೆರ್ರಾಫಾರ್ಮ್ ಬಳಿ ಅಂತಿಮಗೊಳಿಸಲಾಗಿದೆ. ಈಗಾಗಲೇ ಸರ್ಕಾರದ 50 ಎಕರೆ ಭೂಮಿ ಇದ್ದು, ಖಾಸಗಿಯವರಿಂದ ಸುಮಾರು 65 ಎಕರೆ ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಟೆರ್ರಾಫಾರ್ಮಗೆ ಮರು ಜೀವ..!
2006ರಲ್ಲಿ ಈ ಭಾಗದ ರಿಯಲ್ ಎಸ್ಟೇಟ್ ಏಜನ್ಸಿಗಳು ಪ್ರಥಮ ಬಾರಿಗೆ ಗುಂಡ್ಲಹಳ್ಳಿ ಸಮೀಪ ರೈತರಿಗೆ ಉತ್ತಮ ಬೆಲೆ ಕೊಡಿಸುವ ಮೂಲಕ ಭೂಮಿ ಖರೀದಿಸಿ ಟೆರ್ರಾಫಾರ್ಮ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟರು. ಆದರೆ ಕಸವಿಲೇವಾರಿ ಘಟಕ ದಿನ ಕಳೆದಂತೆ ಈ ಭಾಗದ ಜನರ ಪಾಲಿನ ಮೃತ್ಯು ಕೂಪವಾಗಿ ಕಾಡಲಾರಂಭಿಸಿತ್ತು.
ಇದರ ವಿರುದ್ಧ ಸಿಡಿದೆದ್ದ ಸ್ಥಳೀಯ ಜನ 2014ರಲ್ಲಿ ಟೆರ್ರಾ ಫಾರ್ಮ ಬಂದ್ ಮಾಡಿಸುವಲ್ಲಿ ಸಫಲರಾಗಿದ್ದರು.
ಆದರೆ ಈಗ ದೊಡ್ಡಬಳ್ಳಾಪುರಕ್ಕೆ ಮತ್ತೆ ಬಿಬಿಎಂಪಿ ಕಸ ಕಂಟಕ ಎದುರಾಗಿದ್ದು, ತಾಲೂಕಿನ ಜನರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ, ಟೆರ್ರಾಫಾರ್ಮ್ವನ್ನು ಮತ್ತೆ ಆರಂಭಿಸಲು ಬಿಬಿಎಂಪಿ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.
ಈಗಾಗಲೇ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿಗರೇನಹಳ್ಳಿಯ ಬಿಬಿಎಂಪಿ ಕಸ ವಿಲೇವಾರಿ ಘಟಕದಿಂದ ತೊಂದರೆಗೆ ಒಳಗಾಗಿರುವ ಗ್ರಾಮಗಳಲ್ಲಿ ಇಲ್ಲಿಯವರೆಗೂ ಹಲವಾರು ಸುತ್ತಿನ ಹೋರಾಟಗಳು ನಡೆದಿವೆ. ಆದರೆ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಭರವಸೆಗಳನ್ನು ನಂಬಿ ಇಲ್ಲಿನ ಜನ ತೊಂದರೆಗಳನ್ನು ಅನುಭವಿಸುವಂತಾಗಿದೆ.
ಚಿಗರೇನಹಳ್ಳಿಯಲ್ಲಿನ ಎಂಎಸ್ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಎಲ್ಲಾ ಜನರ ಅಭಿಪ್ರಾಯದಂತೆ ಹೋರಾಟ ರೂಪಿಸುವ ಮೂಲಕ ಇಲ್ಲಿಗೆ ಮತ್ತೆ ಕಸ ಬಾರದಂತೆ ತಡೆಯಲು ಹೋರಾಟ ನಡೆದಿದೆ.
ಗ್ರಾಮಸಭೆಗಳು ನಡೆದು ನಂತರ ಎಲ್ಲಾ ಸಂಘಟನೆಗಳು, ರಾಜಕೀಯ ಪಕ್ಷಗಳನ್ನು ಒಳಗೊಂಡ ಹೋರಾಟ ಸಮಿತಿ ರಚಿಸಿಕೊಂಡು ಮುಂದಿನ ಹೋರಾಟವನ್ನು ವ್ಯವಸ್ಥಿತವಾಗಿ ನಡೆಸಬೇಕೆಂಬ ಹೋರಾಟ ಏಕಾಏಕಿ ತಣ್ಣಗಾಗಿ ಹೋಯಿತು.
ಹಲವರ ಪಾಪದ ಕೂಸಾಗಿ ತಾಲ್ಲೂಕಿಗೆ ಒಕ್ಕರಿಸಿರುವ ಬಿಬಿಎಂಪಿ ಕಸದ ವಿರುದ್ಧ ಮತ್ತೆ ಜನ ಜಾಗೃತಿ ಮೂಡಿಸಿ ಎಲ್ಲರನ್ನು ಒಳಗೊಂಡಂತೆ ಹೋರಾಟ ಮಾಡುವ ತುರ್ತು ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ಬಿಬಿಎಂಪಿ ಕಸ ವಿಲೇವಾರಿ ಘಟಕದ ಸುತ್ತ ಮುತ್ತಲಿನ ಸಕ್ಕರೆಗೊಳ್ಳಹಳ್ಳಿ, ಭಕ್ತರಹಳ್ಳಿ, ಸಾಸಲು ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮಗಳಿಂದ ದನ, ಕರು, ಮೇಕೆ, ಕುರಿಗಳಂತಹ ಸಾಕುಪ್ರಾಣಿ, ಹಣ್ಣು, ತರಕಾರಿಗಳನ್ನು ಖರೀದಿ ಮಾಡಲು ಜನ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಇದಿಷ್ಟೇ ಅಲ್ಲದೆ ಈ ಗ್ರಾಮಗಳಿಗೆ ಹೆಣ್ಣುಗಳನ್ನು ಕೊಡಲು, ಹೆಣ್ಣುಗಳನ್ನು ಪಡೆಯಲು ಯೋಚಿಸುವಂತಾಗಿದೆ. ಈ ಸ್ಥಿತಿ ಕಸ ವಿಲೇವಾರಿ ಘಟಕದ ಗ್ರಾಮಗಳಿಗೆ ಮಾತ್ರ ಸೀಮಿತ ಎನ್ನುತ್ತ ಕಸ ವಿಲೇವಾರಿ ಘಟಕದಿಂದ ದೂರದ ಗ್ರಾಮಗಳ ಜನರು ಮೈ ಮರೆತು ಸುಮ್ಮನೆ ಕೂರುವಂತಿಲ್ಲ.
ಬಿಬಿಎಂಪಿ ಕಸದಿಂದ ರೋಗ ಭಾದೆಗಳಿಗೆ ತುತ್ತಾದ ಜನ, ಜಾನುವಾರುಗಳಿಂದ ಹರಡುವ ಖಾಯಿಲೆಗಳು ಊಹೆಗೂ ನಿಲುಕುವುದಿಲ್ಲ.
ಈ ಹಿಂದಿನ ಹೋರಾಟಗಳ ಏಳು ಬೀಳು, ಸ್ವಾರ್ಥಗಳನ್ನು ಬದಿಗಿಟ್ಟು ಟೆರ್ರಾಫಾರ್ಮ ಆರಂಭಿಸಲು ಸಿದ್ದತೆ ನಡೆಸಿರುವ ಬಿಬಿಎಂಪಿ ಕಸದ ವಿರುದ್ಧ ತಾಲೂಕಿನ ಜನತೆ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.