ದೊಡ್ಡಬಳ್ಳಾಪುರ (Doddaballapura): ಯುಗಾದಿ, ರಂಜಾನ್ ಮತ್ತು ಶ್ರೀರಾಮ ಶೋಭಯಾತ್ರೆ ಹಿನ್ನೆಲೆಯಲ್ಲಿ ಆಚರಣೆ ಹಿನ್ನೆಲೆಯಲ್ಲಿ ನಗರದ ಡಾ.ಬಾಬು ಜಗಜೀವನ್ ರಾಂ ಭವನದಲ್ಲಿ ಶುಕ್ರವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಕೆ ಬಾಬಾ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಎಸ್ಪಿ ಸಿಕೆ ಬಾಬಾ, ಹಬ್ಬಗಳು ಸಂಪ್ರದಾಯ ಹಾಗೂ ಸಂಭ್ರಮದಿಂದ ನಡೆಯಬೇಕು. ಆದರೆ ಮತ್ತೊಬ್ಬರಿಗೆ ತೊಂದರೆಯುಂಟು ಮಾಡುವ ರೀತಿಯಲ್ಲಿ ಇರಬಾರದು.
ಎಲ್ಲಾ ಧರ್ಮಗಳ, ಆಚರಣೆಯ ಗುರಿ,ಉದ್ದೇಶವು ಮಾನವನ ಒಳಿತೇ ಆಗಿದೆ. ಆದರೆ ಗುರಿಮುಟ್ಟಲು ಅನುಸರಿಸುವ ಮಾರ್ಗಗಳು ಭಿನ್ನವಾಗಿವೆ. ಜನರು ಶಾಂತಿ, ನೆಮ್ಮದಿಯಿಂದ ಹಬ್ಬಗಳನ್ನು ಆಚರಿಸಬೇಕು ಎನ್ನುವುದೇ ನಮ್ಮ ಮುಖ್ಯ ಆಶಯವಾಗಿದೆ. ಆದರೆ ಶಾಂತಿಗೆ ಅಡ್ಡಿಯಾಗುವ ರೀತಿಯಲ್ಲಿ ಯಾರೇ ನಡೆದುಕೊಂಡರು ಯಾವುದೇ ಮುಲಾಜಿಗೆ ಒಳಗಾಗದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಶಾಂತಿ, ಸೌಹಾರ್ಧತೆಗೆ ಹೆಸರು ಮಾಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಈ ಹಿಂದೆ ಯಾವುದೇ ಹಬ್ಬದ ಸಂದರ್ಭದಲ್ಲೂ ಗಲಾಟೆಗಳು ನಡೆದಿಲ್ಲ. ಆಕಸ್ಮಿಕವಾಗಿ ನಡೆಯುವ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸ್ಥಳೀಯ ಸಮುದಾಯದ ಮುಖಂಡರು ಮುಂದೆ ನಿಂತು ಪರಿಹರಿಸಬೇಕು.
ಎಲ್ಲರು ಶಾಂತಿಯಿಂದ ಇದ್ದರೆ ಮಾತ್ರ ನಮ್ಮೆಲ್ಲರ ಜೀವನ ಸಮೃದ್ಧವಾಗಿರಲು ಸಾಧ್ಯವಾಗಲಿದೆ. ನಮ್ಮ ಆಚರಣೆ ಚಿಂತನೆಗಳು ಬೇರೆಯವರಿಗೆ ತೊಂದರೆಯಾಗಬಾರದು ಎಂದರು.
ಶಾಂತಿ ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್, ಯುಗಾದಿ, ರಂಜಾನ್ ಹಾಗೂ ಶ್ರೀರಾಮ ಶೋಭಾ ಯಾತ್ರೆ ನಡೆಯುತ್ತಿರುವುದರಿಂದ ಸಮುದಾಯದ ಮುಖಂಡರು ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆಯುವಂತೆ ಸೂಚನೆಗಳನ್ನು ನೀಡಬೇಕು ಎಂದರು.
ದೇಶದ ಯಾವುದೋ ಮೂಲೆಯಲ್ಲಿ, ಯಾವುದೇ ವರ್ಷದಲ್ಲಿ ನಡೆದಿರುವ ಸುಳು ಸುದ್ಧಿ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬೀಡುವ ಮೂಲಕ ಸಮಾಜದಲ್ಲಿ ಶಾಂತಿಭಂಗಕ್ಕೆ ಪ್ರಯತ್ನಿಸಿದರೆ ಸೈಬರ್ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಈ ವೇಳೆ ತಹಶೀಲ್ದಾರ್ ವಿಭಾವಿದ್ಯಾರಾಥೋಡ್, ಡಿವೈಎಸ್ಪಿ ರವಿ, ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಹಾಗೂ ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.