ದೊಡ್ಡಬಳ್ಳಾಪುರ (Doddaballapura): ಚೈತ್ರ ಮಾಸದ ವಿಶ್ವಾವಸು ಸಂವತ್ಸರದ ಯುಗಾದಿ ಹಬ್ಬವನ್ನು ತಾಲೂಕಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಜನತೆ ಮನೆಯ ಬಾಗಿಲುಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ, ಹೊಸ ಬಟ್ಟೆಗಳನ್ನು ಧರಿಸಿ, ಚಿತ್ತಾರದ ರಂಗೋಲಿಗಳನ್ನು ಬಿಡಿಸಿ, ಹಬ್ಬಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ನಂತರ ಮನೆಗಳಲ್ಲಿ ಪೂಜೆ ಸಲ್ಲಿಸಿ, ಬದುಕಿನಲ್ಲಿ ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ದ್ಯೋತಕವಾಗಿ ಬೇವು ಬೆಲ್ಲ ಹಂಚುವುದರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹೊಸ ಪಂಚಾಂಗಕ್ಕೆ ಪೂಜೆ ಸಲ್ಲಿಸಲಾಯಿತು. ಹಲವೆಡೆ ಪಂಚಾಂಗ ಶ್ರವಣ ನಡೆಯಿತು.
ವಿಶೇಷ ಪೂಜೆ
ತಾಲೂಕಿನ ಘಾಟಿ ಕ್ಷೇತ್ರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಕನಸವಾಡಿಯ ಶನಿಮಹಾತ್ಮಸ್ವಾಮಿ ದೇವಾಲಯ, ನಗರದ ನೆಲದಾಂಜನೇಯಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು.
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ದೇವರಿಗೆ ಬೆಳಗ್ಗೆ ಅಭಿಷೇಕ ಹಾಗೂ ವಿಶೇಷ ಅಲಂಕಾರ ನಂತರ ಮಹಾಮಂಗಳಾರತಿ ನಡೆಯಿತು.
ಕಾಮಣ್ಣಮೂರ್ತಿಗೆ ವಿಶೇಷ ಪೂಜೆ
ಯುಗಾದಿ ವೇಳೆ ಬಯಲುಸೀಮೆಯಲ್ಲಿ ವಿಶಿಷ್ಟವಾಗಿ ಆಚರಿಸುವ ಕಾಮಣ್ಣಮೂರ್ತಿಯನ್ನು ತಣ್ಣಗೆ ಮಾಡುವ ಆಚರಣೆಯು ನಗರದ ವಿವಿದೆಡೆ ಶ್ರದ್ಧಾ ಭಕ್ತಿ, ಸಂಭ್ರಮಗಳಿಂದ ನೆರವೇರಿತು.
ಜೇಡಿಮಣ್ಣಿನಿಂದ ಬಿಡಿಸಿದ್ದ ಸುಂದರ ಕಾಮನ ಮೂರ್ತಿಗೆ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕಾರ ಮಾಡಲಾಗಿತ್ತು.
ನಗರದ ರಂಗಪ್ಪ ಸರ್ಕಲ್‍ನಲ್ಲಿನ ಶ್ರೀ ಬಾಲಾಂಜನೇಯ ವ್ಯಾಯಾಮ ಕಲಾ ಯುವಕ ಸಂಘದ ವತಿಯಿಂದ ಬಿಡಿಸಲಾಗಿದ್ದ ಬೃಹತ್ ಕಾಮನಮೂರ್ತಿಗೆ ಕಾಮನ ತಣ್ಣಗಿನ ಆಚರಣೆ ಮಾಡಲಾಯಿತು.
ನಗರದ ಅರಳು ಮಲ್ಲಿಗೆ ಬಾಗಿಲು ಸಂಜಯ ನಗರ, ರೋಜಿಪುರ, ಗಾಣಿಗರಪೇಟೆ ವೀರಭದ್ರನಪಾಳ್ಯ, ಸೇರಿದಂತೆ ವಿವಿದೆಡೆ ವಿವಿಧ ಮಾದರಿಯ ಕಾಮಣ್ಣನ ಮೂರ್ತಿಗಳನ್ನು ಬಿಡಿಸಿ ಪೂಜೆ ಸಲ್ಲಿಸಲಾಯಿತು.
ಕಳೆಗುಂದಿದ ಹೊಸತೊಡಕು
ಯುಗಾದಿಯ ಸಿಹಿ ತಿಂದ ಮೇಲೆ ಹಬ್ಬದ ರಜದಲ್ಲಿ ಮಾಂಸದ ಅಡುಗೆ ಮಾಡುವ ಪದ್ದತಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ.
ಹೊಸತೊಡಕು ಎಂದು ಸಾಮಾನ್ಯರಲ್ಲಿ ಕರೆಯುವ ಹಬ್ಬದ ಮಾರನೇ ದಿನ ಮಾಂಸದ ಅಂಗಡಿಗಳಲ್ಲಿ ಮಾಂಸ ಖರೀದಿ ನಡೆಯುತ್ತದೆ. ಆದರೆ ಈ ಬಾರಿ ಹಬ್ಬದ ಮಾರನೇ ದಿನ ಸೋಮವಾರವಾದ್ದರಿಂದ ಮಾಂಸ ಕೊಳ್ಳುವವರ ಸಂಖ್ಯೆ ಕಡಿಮೆ ಇತ್ತು.
ರಂಜಾನ್ ಆಚರಣೆಯ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮಾಂಸ ಖರೀದಿ ಮಾಡುತ್ತಿರುವುದು ಕಂಡು ಬಂದಿತು.