ಸಿಂಗಪುರ: ಸಿಂಗಪುರ ಶಾಲೆಯಲ್ಲಿ ಮಂಗಳವಾರ ಅಗ್ನಿ ಅವಘಡವಾಗಿದೆ. ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕಿರಿಯ ಪುತ್ರ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ.
ಬೆಂಕಿ ಅವಘಡವಾದಾಗ ಶಾಲೆಯಲ್ಲೇ ಇದ್ದ ಪವನ್ ಕಲ್ಯಾಣ ಅವರ ಪುತ್ರ ಮಾರ್ಕ್ ಶಂಕರ್ ಕೈ-ಕಾಲುಗಳಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಅಲ್ಲದೇ, ಶ್ವಾಸಕೋಶಕ್ಕೆ ಹೊಗೆ ನುಗ್ಗಿ ತೀವ್ರ ಉಸಿರಾಟದ ತೊಂದರೆ ಅನುಭವಿಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಯನ್ನು ಸಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ನಟ, ಡಿಸಿಎಂ ಪವನ್ ಕಲ್ಯಾಣ್ ಅವರ 3ನೇ ಪತ್ನಿ ರಷ್ಯಾ ಮೂಲದ ಅನ್ನಾ ಲೆಕ್ಷೇವಾ ಅವರಿಗೆ ಇಬ್ಬರು ಮಕ್ಕಳು. ಮಾರ್ಕ್ ಶಂಕರ್ ಮತ್ತು ಪೊಲೇನಾ ಅಂಜನಾ. ಇಬ್ಬರೂ ಸಿಂಗಪುರದಲ್ಲಿನ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಡಿಸಿಎಂ ಪವನ್ ಕಲ್ಯಾಣ್ ಸರಕಾರ ಕೆಲಸಗಳಲ್ಲಿ ಸದಾ ಮಗ್ನರಾಗಿರುವುದರಿಂದ ಆಂಧ್ರದಲ್ಲೇ ಹೆಚ್ಚು ಸಮಯವಿರುತ್ತಾರೆ. ತಿಂಗಳಲ್ಲಿ 1-2 ಬಾರಿ ಸಿಂಗಪುರಕ್ಕೆ ಹೋಗಿ ಮಕ್ಕಳು ಮತ್ತು ಕುಟುಂಬವನ್ನು ಭೇಟಿ ಆಗುತ್ತಾರೆ ಎನ್ನಲಾಗಿದೆ.