ದೊಡ್ಡಬಳ್ಳಾಪುರ; ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ (Kanasavadi) ಏ.12 ಮತ್ತು 13ರಂದು ಶನಿವಾರ ಮತ್ತು ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಲಾಗಿದೆ.
ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂದಿರದಿಂದ ಮೆರವಣಿಗೆಗೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಅವರು ಚಾಲನೆ ನೀಡಿದರು.
ಸಮ್ಮೇಳಾಧ್ಯಕ್ಷರಾದ ಹಿರಿಯ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ಕಲಾವಿದ ಟಿ.ಕೆಂಪಣ್ಣ ಅವರನ್ನು ಕಲಾ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆಯ ಮೂಲಕ ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆದೊಯ್ಯಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಮಧುರೆ ಹೋಬಳಿಯ ಸ್ಥಳೀಯ ಆಡಳಿತ, ಮುಖಂಡರು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.
ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ್, ಶಾಸಕ ಧೀರಜ್ ಮುನಿರಾಜ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಗಣ್ಯರು ಭಾಗವಹಿಸಲಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕನ್ನಡಪರ ಚಿಂತಕರು, ಸಾಹಿತಿಗಳು, ಸ್ಥಳೀಯ ಸಾಧಕರು ವಿವಿಧ ವಿಚಾರಗೋಷ್ಠಿ, ಕವಿಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. 50ಕ್ಕೂ ಹೆಚ್ಚಿನ ಸಾಧಕ ಗಣ್ಯರಿಗೆ ಪುರಸ್ಕಾರ ನೀಡಲಾಗುತ್ತಿದೆ.
ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲು ಜಿಲ್ಲಾಡಳಿತ ಯೋಜಿಸಿದೆ. ಎರಡೂ ದಿನಗಳ ಕಾಲ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ.
ಇಂದಿನಿಂದ 2 ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಮೊದಲ ದಿನ ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನಾ ಕಾರ್ಯಕ್ರಮ, ಕನ್ನಡದ ಅರಿವು ಮತ್ತು ಅಭಿಯಾನ ಕುರಿತ ವಿಚಾರಗೋಷ್ಠಿ ತ.ನ.ಪ್ರಭುದೇವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಚಿಂತಕ ಕೆ.ರಾಜಕುಮಾರ್ ವಿಚಾರ ಮಂಡನೆ ಮಾಡಲಿದ್ದಾರೆ. ಯುವ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
2ನೇ ದಿನವಾದ ಭಾನುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ದಿ ಮತ್ತು ಆತಂಕಗಳು ಕುರಿತ ವಿಚಾರಗೋಷ್ಠಿ ವಿಮರ್ಶಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾವಯವ ಕೃಷಿ ತಜ್ಞ ಡಾ.ಶಿವನಾಪುರ ರಮೇಶ್, ಜಗನ್ನಾಥ್ಪ್ರಕಾಶ್ ವಿಷಯ ಮಂಡನೆ ಮಾಡುವರು.
ಬಳಿಕ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ಸನ್ಮಾ ಹಾಗೂ ಸಮಾರೋಪ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.