
ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ನಂದಿ ಬೆಟ್ಟದಲ್ಲಿ (Nandi Hills) ರೋಪ್ ವೇ (Ropeway) ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಪ್ರಸ್ತಾವನೆಗೆ ಪರಿಸರ ಸಚಿವಾಲಯದಿಂದ ಷರತ್ತು ಬದ್ದ ಅನುಮೋದನೆ ದೊರೆತಿದೆ.
ರೋಪ್ ವೇ ನಿರ್ಮಾಣ ಕಾಮಗಾರಿಗೆ ಮೇ ತಿಂಗಳಿನಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲು ಸರಕಾರ ಮುಂದಾಗಿದೆ ಎನ್ನಲಾಗಿದೆ. ಇದರೊಂದಿಗೆ, ದೀರ್ಘಾವಧಿಯಿಂದ ನನೆಗುದಿಯಲ್ಲಿದ್ದ ಯೋಜನೆ ಚುರುಕು ಪಡೆಯಲಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಂತಿಮ ಅನುಮೋದನೆಗಾಗಿ ಕಾಯುತ್ತಿದ್ದು, ಮೇ ಒಳಗಾಗಿ ಅಂತಿಮ ಅನುಮೋದನೆ ಪಡೆಯುವ ನಿರೀಕ್ಷೆಯಲ್ಲಿದೆ.
ಕನಿಷ್ಠ ಪರಿಸರ ಅಡಚಣೆ ಖಾತರಿಪಡಿಸಿಕೊಂಡ ನಂತರ ಅರಣ್ಯ ಇಲಾಖೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದ ನಂತರ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದದ ಪರಿವೇಶ್ ಪೋರ್ಟಲ್ ಮೂಲಕ ಅನುಮೋದನೆ ನೀಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಸೇಟ್ ಫಾರೆಸ್ಟ್ ಲಿಮಿಟ್ ವ್ಯಾಪ್ತಿಯಲ್ಲಿ ಬರುವ ರೋಪ್ ವೇ ಯೋಜನಾ ಸ್ಥಳದಲ್ಲಿ ಮರ ಕಡಿಯುವುದನ್ನು ನಿಷೇಧಿಸುವುದು (ನೀಲಗಿರಿ ಮರವನ್ನು ಹೊರತುಪಡಿಸಿ), ಬ್ಲಾಸ್ಟಿಂಗ್ ಅಥವಾ ಡ್ರಿಲ್ಲಿಂಗ್ ನಿಷೇಧಿಸುವುದು ಮತ್ತು ಇಲಾಖೆಯ ಮೇಲ್ವಿಚಾರಣೆಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುಬೇಕೆಂಬ ಷರತ್ತುಗಳನ್ನು ವಿಧಿಸಲಾಗಿದೆ.
ಯಾವುದೇ ರಸ್ತೆಗಳನ್ನು ನಿರ್ಮಿಸಲಾಗುವುದಿಲ್ಲ ಮತ್ತು ಅರಣ್ಯ ಪ್ರದೇಶದಲ್ಲಿ ಜೆಸಿಬಿಗಳನ್ನು ಬಳಸುವುದಿಲ್ಲ ಎಂಬ ಬಗ್ಗೆ ಖಾತರಿ ನೀಡಬೇಕು ಎಂದೂ ಹೇಳಲಾಗಿದೆ.
ವಿವರ
ನಂದಿ ಬೆಟ್ಟವು ಕರ್ನಾಟಕದ, ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನಪ್ರಿಯ ಗಿರಿಧಾಮವಾಗಿದೆ. ಆ ಪ್ರದೇಶದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮತ್ತು ಅನಿಯಂತ್ರಿತ ಪ್ರವಾಸೋದ್ಯಮಕ್ಕೆ ಪರಿಹಾರವಾಗಿ 2.93 ಕಿ.ಮೀ. ಉದ್ದದ ರೋಪ್ಲೇ ಯೋಜನೆಯ ಪ್ರಸ್ತಾಪ ಮಾಡಲಾಗಿತ್ತು.
ವಾಹನ ದಟ್ಟಣೆಯಿಂದ ಉಂಟಾಗುವ ವಾಯು ಮಾಲಿನ್ಯ ಕಡಿಮೆ ಮಾಡುವ ಉದ್ದೇಶವೂ ಈ ಯೋಜನೆಯ ಹಿಂದಿದೆ. ಒಟ್ಟು 93.40 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.
ಎಲ್ಲಾ ರೀತಿಯ ಅನುಮೋದನೆಗಳು ದೊರೆತ ಬಂದ ನಂತರ ಒಂದು ವರ್ಷದೊಳಗೆ ರೋಪ್ ವೇ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ವರದಿ ತಿಳಿಸಿದೆ.
ನಂದಿ ಬೆಟ್ಟದ ಬುಡದಿಂದ ರೋಪ್ ವೇ ಪ್ರಾರಂಭವಾಗಲಿದ್ದು, ಸುಮಾರು ಏಳು ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರಲಿದೆ. ಅದರಲ್ಲಿ 86 ಗುಂಟೆ ಅರಣ್ಯ ಭೂಮಿಯಾಗಿದ್ದು, ನಂದಿ ಬೆಟ್ಟದ ತುದಿಯ ಭೂಮಿಯಾಗಿದೆ.
ಇನ್ನೂ 2 ಎಕರೆ ಭೂಮಿ ಬಳಸಿಕೊಳ್ಳಲಾಗುವುದು. ಒಂದು ವೇಳೆ, ನಿಗದಿತ ಸಮಯಕ್ಕೆ ಪೂರ್ಣಗೊಂಡರೆ ಇದು ಕರ್ನಾಟಕದ ಮೊದಲ ರೋಪ್ವೇ ಯೋಜನೆಯಾಗಿ ಹೊರಹೊಮ್ಮಲಿದೆ ಎಂದು ವರದಿಯಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						