ಧಾರವಾಡ (Harithalekhani); ನಮಗೆ, ನಿಮಗೆಲ್ಲರಿಗೂ ಇರುವ ಸಂಬಳ, ಸವಲತ್ತು ಸಾರ್ವಜನಿಕರಿಂದ ಬಂದಿದ್ದು, ನಮ್ಮ ನಮ್ಮ ಕೆಲಸ, ಕರ್ತವ್ಯಗಳನ್ನು ಮಾನವೀಯತೆ, ಆತ್ಮಸಾಕ್ಷಿಯಿಂದ ಮಾಡಬೇಕು. ವಿನಾಕಾರಣ ವಿಳಂಬ, ಉದ್ಯೋಗದಲ್ಲಿ ಆಲಸ್ಯ ತೋರಿಸುವ ಮತ್ತು ನಡಿತೈತಿ ಬಿಡು ಎನ್ನುವ ಮನೋಭಾವನೆಯ ಅಧಿಕಾರಿ, ಸಿಬ್ಬಂದಿಗಳು ಮನೆಗೆ ಹೋಗಬಹುದು. ಜಿಲ್ಲೆಯ ಅಧಿಕಾರಿ, ನೌಕರರು ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ (Santosh lad) ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಸೋಮವಾರ ಬೆಳಿಗ್ಗೆಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 9ನೇ ಜನತಾ ದರ್ಶನದಲ್ಲಿ ಸಾರ್ವಜನಿಕರ, ಸಂಘ ಸಂಸ್ಥೆಗಳ ದೂರು, ಅಹವಾಲುಗಳನ್ನು ಸ್ವೀಕರಿಸಿ, ನಂತರ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ, ಮಾತನಾಡಿದರು.
ಜನತಾ ದರ್ಶನದಲ್ಲಿ ಬರುವ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಉತ್ತರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ.
ಸಲ್ಲಿಕೆ ಆಗುವ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಬೇರೆ ಹಂತಕ್ಕೆ ಅರ್ಜಿ ರವಾನಿಸಬೇಕಾದಲ್ಲಿ ಅರ್ಜಿದಾರನಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಆದರೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕ ಕಳಕಳಿ, ಮಾನವೀಯತೆ ನೋಡದೆ ಯಾಂತ್ರಿಕವಾಗಿ ವರ್ತಿಸುತ್ತಿದ್ದಾರೆ ಎಂಬುದು ಸಲ್ಲಿಕೆ ಆಗುತ್ತಿರುವ ಅರ್ಜಿಗಳಿಂದ ತಿಳಿದುಬರುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಬರೀ ವೇತನಕ್ಕೆ ದುಡಿಯಬಾರದು. ಸರಕಾರದ ಸಂಬಳ ಪಡಿತೀವಿ, ಎಚ್ಚರವಿರಬೇಕು. ಜನತಾ ದರ್ಶನಕ್ಕೆ ಬರುವ ಬಹುತೇಕ ಸಮಸ್ಯೆ, ಅಹವಾಲುಗಳು ಅಧಿಕಾರಿಗಳ, ಸಿಬ್ಬಂದಿಗಳ ತಪ್ಪಿನಿಂದ ಆಗುತ್ತಿವೆ. ಸುಖಾಸುಮ್ಮನೆ ಜನರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ.
ಕಡತಗಳ ವಿಲೇವಾರಿಯಲ್ಲಿ ವಿಳಂಬ ಮಾಡಬೇಡಿ. ನೌಕರಿಗೆ ಬಂದ ಮೇಲೆ ಅಧಿಕಾರಿಗಳಲ್ಲಿ ಒಂದು ಮೌಲ್ಯ, ಪ್ರೇರಣೆ, ಸೇವಾ ಮನೋಭಾವ ಇರಬೇಕು ಎಂದು ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ನೈತಿಕ ಪಾಠ ಮಾಡಿದರು.
ಕೆಲವು ಅಹವಾಲುಗಳು ಜನತಾ ದರ್ಶನಕ್ಕೆ ಮತ್ತೇ ಮತ್ತೇ ಸಲ್ಲಿಕೆ ಆಗುತ್ತಿವೆ. ಇವುಗಳಿಗೆ ಬರೀ ಹಿಂಬರಹ ನೀಡಿ, ಹೊತ್ತು ಹಾಕಬೇಡಿ, ನಿಜವಾದ ಪರಿಹಾರ ಸೂಚಿಸಿ. ಸರಕಾರದ ನೀತಿಗೆ ಸಂಬಂಧಿಸಿದ್ದರೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ. ಸರಕಾರಿ ಕರ್ತವ್ಯವನ್ನು ನಿಯಮಾನುಸಾರ ಮತ್ತು ಸಾರ್ವಜನಿಕ ಕಳಕಳಿಯಿಂದ ಮಾಡಿ ಎಂದು ಸಚಿವರು ತಿಳಿಸಿದರು.
ಅಹವಾಲು ಮರು ಸಲ್ಲಿಕೆಯಾದರೆ, ಅಧಿಕಾರಿ ಹೋಣೆಗಾರ
ಮುಂದಿನ ಜನತಾ ದರ್ಶನದಲ್ಲಿ ಯಾವುದೇ ಸಾರ್ವಜನಿಕ ದೂರು, ಅಹವಾಲು ಮರು ಸಲ್ಲಿಕೆಯಾದರೆ ಮತ್ತು ಅದನ್ನು ಸರಿಯಾಗಿ ನಿಯಮಾನುಸಾರ ಪರಿಶೀಲಿಸಿದೇ, ವಿಲೇವಾರಿ ಮಾಡಿದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಜವಾಬ್ದಾರ ಮಾಡಲಾಗುತ್ತದೆ.
ಅಹವಾಲುಗಳು ಕಾಲಮಿತಿಯಲ್ಲಿ ವಿಲೇವಾರಿ ಆಗಬೇಕು. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ಎಚ್ಚರಿಸಿದರು.
ಕಮೀಷನರ್, ಬೆಳಿಗ್ಗೆ 6 ಗಂಟೆಗೆ ಭೇಟಿ ನೀಡಿ
ಪ್ರತಿ ಜನತಾ ದರ್ಶನದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ಹೆಚ್ಚು ಅಹವಾಲು ಸಲ್ಲಿಕೆ ಆಗುತ್ತಿವೆ. ಇದಕ್ಕೆ ಮುಖ್ಯವಾಗಿ ವಿವಿಧ ಸ್ಥಳೀಯ ಪ್ರಾಧಿಕಾರ, ಇಲಾಖೆಗಳ ಮಧ್ಯದಲ್ಲಿ ಸಮನ್ವಯತೆ ಇಲ್ಲದಿರುವುದು ಕಾರಣವಾಗಿದೆ.
ಮಹಾನಗರ ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯುಕ್ತರು ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ ವಾರ್ಡಗಳಲ್ಲಿ ಇರಬೇಕು. ಸ್ವಚ್ಛತೆ, ಸಾರ್ವಜನಿಕ ದೂರುಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಬೇಕು. ಅನಧಿಕೃತ ಕಟ್ಟಡ, ಅನಧಿಕೃತ ಕಾಮಗಾರಿ ಕಂಡುಬಂದಲ್ಲಿ ತಕ್ಷಣ ಕಾನೂನು ಕ್ರಮಕೈಗೊಳ್ಳಬೇಕು. ಪಾಲಿಕೆ ಆಯುಕ್ತರು ಒಂದು ತಂಡವಾಗಿ ಕೆಲಸ ಮಾಡಬೇಕು ಎಂದರು.
ಶೀಘ್ರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ
ಮಹಾನಗರ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ, ಅನಧಿಕೃತ ವಸತಿ ವಿನ್ಯಾಸ ಮತ್ತು ಸಾರ್ವಜನಿಕ ಜಾಗೆಗಳ ಒತ್ತುವರಿ ಹೆಚ್ಚಾಗಿದೆ. ಈ ಕುರಿತು ಸದ್ಯದಲ್ಲಿ ಮಹಾನಗರಪಾಲಿಕೆ, ಜಿಲ್ಲಾಡಳಿತ, ಹುಡಾ, ಪೊಲೀಸ್ ಹಾಗೂ ಸಂಬಂಧಿಸಿದ ಇತರ ಏಜನ್ಸಿಗಳ ಸಭೆ ಜರುಗಿಸಿ, ಅನಧಿಕೃತ ಒತ್ತುವರಿ ತೆರವುಗೊಳಿಸಲು ನೋಟಿಸ್ ನೀಡಲಾಗುತ್ತದೆ.
ಒತ್ತುವರಿದಾರರು ತಾವಾಗಿ ತೆರವುಗೊಳಿಸದಿದ್ದಲ್ಲಿ, ಮಹಾನಗರ ಪಾಲಿಕೆಯಿಂದ ಶೀಘ್ರದಲ್ಲಿ ಒತ್ತುವರಿ ತೆರವು ಹಾಗೂ ಅನಧಿಕೃತ ಕಟ್ಟಡ, ಲೇಜೌಟ್ ತೆರವಿಗೆ ಏಕಕಾಲಕ್ಕೆ ದೊಡ್ಡ ಮಟ್ಟದ ತೆರವು ಕಾರ್ಯಚರಣೆ ಕೈಗೊಳ್ಳಲಾಗುತ್ತದೆ.
ಈ ಕುರಿತು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಪೊಲೀಸ್, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಚಿವ ಸಂತೋಷ ಲಾಡ್ ಅವರು ಸಭೆಯಲ್ಲಿ ಸೂಚನೆ ನೀಡಿದರು.
167 ಅನಧಿಕೃತ ಲೇಜೌಟ್
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹುಡಾ ಅಧಿಕೃತವಾಗಿ ಗುರುತಿಸಿರುವ ಸುಮಾರು 167 ಅನಧಿಕೃತ ಲೇಜೌಟ್ ಇವೆ. ಇವುಗಳನ್ನು ತೆರವುಗೊಳಿಸಬೇಕು. ಅನಧಿಕೃತ ಲೇಔಟಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು. ಮತ್ತು ಅಧಿಕೃತವಾಗಿರುವ 2600 ಲೇಔಟಗಳಲ್ಲಿ ಸರಿಯಾಗಿ ನಾಗರಿಕ ಸೌಲಭ್ಯಗಳು ಸೀಗುವಂತೆ ನೋಡಿಕೊಳ್ಳಬೇಕೆಂದು ಸಚಿವರು ಸೂಚಿಸಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹುಡಾಗೆ ಸಂಬಂಧಿಸಿದ 400 ಎಕರೆ ಹಾಗೂ ಪಾಲಿಕೆಯ 300 ಎಕರೆ ಉದ್ಯಾನ ವನವಿದೆ. ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಉತ್ತಮವಾಗಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಸಚಿವರು ತಿಳಿಸಿದರು.
ಪ್ರತಿ 15 ದಿನಕೊಮ್ಮೆ ಪ್ರಗತಿ ಪರಿಶೀಲನೆ
ಇಲಾಖಾವಾರು ಪ್ರಗತಿ ಮತ್ತು ಸಾರ್ವಜನಿಕ ಅರ್ಜಿ, ಕಡತಗಳ ವಿಲೇವಾರಿ ಬಗ್ಗೆ ಪರಿಶೀಲಿಸಲು ಪ್ರತಿ 15 ದಿನಕೊಮ್ಮೆ ಎಲ್ಲ ಇಲಾಖೆ, ನಿಗಮ ಮಂಡಳಿಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಅದನ್ನು ಕ್ರೂಢೀಕರಿಸಿ, ಪರಿಶೀಲಿಸಿ ಯಾವ ಇಲಾಖೆ ಪ್ರಗತಿಯಲ್ಲಿ ಹಿಂದುಳಿದೆ ಎಂಬುದನ್ನು ಪರಿಶೀಲಿಸಿ, ತಮ್ಮ ಕಚೇರಿಗೆ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿ ರಚಿಸಲು ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವಿಶೇಷವಾಗಿ ತಹಶೀಲ್ದಾರ ಕಚೇರಿ, ತಾಲೂಕು ಪಂಚಾಯತ, ನೋಂದಣಿ ಅಧಿಕಾರಿ, ಆರೋಗ್ಯ, ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು ಎಂದರು.
ಜನತಾ ದರ್ಶನಕ್ಕೆ ಗೈರು, ಸೂಕ್ತ ಕ್ರಮಕ್ಕೆ ಶಿಫಾರಸ್ಸು
ಜನತಾ ದರ್ಶನ ಕಾರ್ಯಕ್ರಮದ ನಂತರ ಅಧಿಕಾರಿಗಳ ಸಭೆ ಜರುಗಿಸಿದ ಜಿಲ್ಲಾ ಉಸ್ತುವಾರಿ ಸಚಿವರು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಅನುಮತಿ ಇಲ್ಲದೆ ಗೈರುಹಾಜರಾಗಿರುವುದನ್ನು ಕಂಡು ಕೋಪಗೊಂಡರು. ಸಭೆಯಿಂದ ಅರ್ಧಕ್ಕೆ ಹೋಗಿದ್ದ ಕೆಲವು ಅಧಿಕಾರಿಗಳನ್ನು ಮರಳಿ ಸಭೆಗೆ ಕರೆಸಿ, ಎಚ್ಚರಿಕೆ ನೀಡಿದರು.
ಸಭೆಗೆ ಗೈರಾಗಿದ್ದ ಕೆಲವು ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಇಂತಹ ಅಧಿಕಾರಿಗಳ ವಿರುದ್ಧ ಸಂಬಂಧಿಸಿದ ಇಲಾಖೆಗೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಸಚಿವರಿಗೆ ವಿವರಿಸಿ, ಪರಿಹಾರ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜನತಾ ದರ್ಶನ ಕಾರ್ಯಕ್ರಮವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿಗಳ ಕಚೇರಿಯಿಂದಲೂ ಅಹವಾಲುಗಳ ಮಾನಿಟರಿಂಗ್ ಇರುತ್ತದೆ.
ಅಧಿಕಾರಿಗಳು ಪ್ರೊಆ್ಯಕ್ಟಿವ್ ಆಗಿ ಕೆಲಸ ಮಾಡಬೇಕು. ಅರ್ಜಿ ಸರಿಯಾಗಿ ಪರಿಶೀಲನೆ ಮಾಡದೆ ಹಿಂಬರಹ ನೀಡುವ, ತಿರಸ್ಕರಿಸುವ ಅಧಿಕಾರಗಳ ನಡುವಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇದರಲ್ಲಿ ಲೋಪ ಕಂಡುಬಂದರೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ. ನೋಂದವರಿಗೆ, ಬಾಧಿತರಿಗೆ ನಿಜವಾದ ಸಹಾಯ ಮಾಡಿ, ಸೂಕ್ತ ಪರಿಹಾರದ ಮಾರ್ಗಸೂಚಿಸಿ ಎಂದು ಅಧಿಕಾರಿಗಳಿಗೆ ಅವರು ಹೇಳಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪ ಪೆÇಲೀಸ್ ಆಯುಕ್ತ ಮಾನಿಂಗ ನಂದಗಾವಿ ಅವರು ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ತಾಲೂಕುಗಳ ಸಾರ್ವಜನಿಕರು, ಸಂಘ, ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.