ದೊಡ್ಡಬಳ್ಳಾಪುರ: ಕಾರ್ಮಿಕ ದಿನಾಚರಣೆಯಂದೇ ಶೌಚಾಲಯ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ನಿರತನಾಗಿದ್ದ ಕಾರ್ಮಿಕನಿಗೆ ವಿದ್ಯುತ್ ಶಾಕ್ (electric shock) ಹೊಡೆದಿರುವ ಘಟನೆ ದೊಡ್ಡಬಳ್ಳಾಪುರಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಗರಸಭೆಯಿಂದ ಮಹಿಳಾ ಪೊಲೀಸ್ ಠಾಣೆ ಬಳಿ ಎರಡು ಶೌಚಾಲಯ ನಿರ್ಮಿಸಲಾಗುತ್ತಿದ್ದು, ಇಂದು ಕಾರ್ಮಿಕರ ದಿನಾಚರಣೆಯಾದರೂ ಠಾಣೆಯ ಪೊಲೀಸರಿಗೆ ಮಾಹಿತಿ ನೀಡದೇ ಏಕಾಏಕಿ ಕಾಮಗಾರಿ ಆರಂಭಿಸಿದ್ದಾರೆ ಎನ್ನಲಾಗಿದೆ.
ದುರಾದೃಷ್ಟವಶಾತ್ ಮೋಲ್ಟ್ ಕಂಬಿ ಕಟ್ಟುವ ವೇಳೆ ಸುಮಾರು 8 ಅಡಿ ಉದ್ದದ ಕಬ್ಬಿಣದ ರಾಡ್ ಒಂದು ನಿರ್ಮಾಣ ಹಂತದಲ್ಲಿರುವ ಶೌಚಾಲಯ ಕಟ್ಟದ ಮೇಲೆ ಹಾದು ಹೋಗಿರುವ 11 ಕೆವಿ ವಿದ್ಯುತ್ ಲೈನ್ಗೆ ಸ್ಪರ್ಷಿಸಿದೆ.
ಇದರ ಪರಿಣಾಮ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕ ಉಗನವಾಡಿ ಗ್ರಾಮದ ರಾಕೇಶ್ (35 ವರ್ಷ) ಎನ್ನುವರಿಗೆ ಕಾಲು ಮತ್ತು ಕೈಗೆ ಸುಟ್ಟ ಗಾಯಗಳಾಗಿದೆ.
ಕೂಡಲೇ ಆತನನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಮೂಲಗಳು ತಿಳಿಸಿವೆ.
ಇನ್ನೂ ಈ ಕುರಿತಂತೆ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲು ಮಹಿಳಾ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆಂದು ತಿಳಿದು ಬಂದಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)