ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಗುಂಜೂರು ಗ್ರಾಮದ ಹೊರವಲಯದಲ್ಲಿರುವ ಮುನಿಯಪ್ಪ ಎಂಬುವವರ ತೋಟದ ಮನೆಯಲ್ಲಿ ಸಾಕಿದ್ದ ಒಂದು ಎಮ್ಮೆ ಕರು, 2 ಆಕಳು ಹಾಗೂ ಒಂದು ಹಸು ಸೇರಿ ನಾಲ್ಕು ರಾಸುಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಗುಂಜೂರು ಗ್ರಾಮದ ಹೊರವಲಯದಲ್ಲಿರುವ ಮುನಿಯಪ್ಪ ಎಂಬುವವರ ತೋಟದ ಮನೆಯಲ್ಲಿ ಸುಮಾರು 10 ಹಸುಗಳನ್ನು ಸಾಕಲಾಗಿದ್ದು, ಎಂದಿನಂತೆ ಹಸುಗಳ ಮೈ ತೊಳೆದು, ಬೂಸ ನೀರು ಇಟ್ಟು ಶೆಡ್ಡಿನೊಳಗೆ ಕರೆದೊಯ್ಯುವಾಗ ದಿಢೀರನೆ ಮೂರು ಹಸು ಸೇರಿದಂತೆ ಒಂದು ಎಮ್ಮೆ ಕರು ಕುಸಿದು ಬಿದ್ದು ಸಾವನ್ನಪ್ಪಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹಸುಗಳ ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಕಲುಷಿತ ನೀರಿನಿಂದ ಹಸುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ. ಇನ್ನು ಮೂರ್‍ನಾಲ್ಕು ಹಸುಗಳು ನಿತ್ರಾಣವಾಗಿದ್ದು, ಸ್ಥಳಕ್ಕೆ ಪಶು ವೈದ್ಯರಾದ ಡಾ.ನವೀನ್, ಡಾ. ಕುಮಾರಸ್ವಾಮಿ, ಡಾ.ದೀಪಕ್ ತೆರಳಿ ಚಿಕಿತ್ಸೆ ನೀಡಿದ್ದಾರೆ.
ಹಸುಗಳಿದ್ದ ಸ್ಥಳದ ನೀರಿನ ಮಾದರಿಯನ್ನು ಪಡೆಯಲಾಗಿದೆ. ಘಟನೆ ಬಗ್ಗೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಎನ್.ಜಗದೀಶ್ ಅವರಿಗೆ ಮಾಹಿತಿ ನೀಡಲಾಗಿದೆ.
ಅಸ್ವಸ್ಥ ಹಸುಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಹಸುಗಳ ಸಾವಿನ ನಿಖರ ಕಾರಣ ತಿಳಿಯಲಿದೆ. ಸಾವನ್ನಪ್ಪಿದ ಹಸುಗಳಿಗೆ ಕಾಮಧೇನು ವಿಪತ್ತು ಯೋಜನೆಯಡಿ ಹಾಗೂ ರೈತಾಭಿವೃದ್ದಿ ಯೋಜನೆಯಡಿ, ಪ್ರತಿ ಹಸುವಿಗೆ 10 ಸಾವಿರ ಪರಿಹಾರದ ಹಣವನ್ನು ನೀಡಲಾಗುವುದು ಎಂದು ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಿಶ್ವನಾಥ್ ತಿಳಿಸಿದ್ದಾರೆ.