ದೊಡ್ಡಬಳ್ಳಾಪುರ: ನಗರದ ಸರ್ಕಾರಿ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ (International Nurses Day) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೊಡಿಗೆಹಳ್ಳಿ ಗ್ರಾಮಪಂ ಸದಸ್ಯೆ ಕೆ.ನಾಗರತ್ನಮ್ಮ ದಾದಿಯರನ್ನು ಅಭಿನಂದಿಸಿ ಮಾತನಾಡಿ, ರೋಗಿಗಳ ಆರೈಕೆಯಲ್ಲಿ ವೈದ್ಯರಷ್ಟೇ ಕಾಳಜಿಯಿಂದ ಸುಷ್ರೂಷೆ ಮಾಡುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ ಎಂದರು.
ದಾದಿಯರ ಸೇವೆಯನ್ನು ಸ್ಮರಿಸುವ ಸಲುವಾಗಿ ಮೇ 12ರಂದು ಅಂತಾರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ದಾದಿಯರ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ವಿಶ್ವ ದಾದಿಯರ ದಿನಾಚರಣೆ ಮಾಡುವುದು ಅರ್ಥಪೂರ್ಣವಾಗಿದೆ.
ಎಂತಹದ್ದೇ ಸನ್ನಿವೇಶ ಬಂದರೂ ಇನ್ನೊಬ್ಬರಿಗಾಗಿ ಸೇವೆ ಸಲ್ಲಿಸುವ ಇವರ ನಗುಮುಖದ ಸೇವೆಯೇ ರೋಗಿಗಳ ಪಾಲಿಗೆ ದೊಡ್ಡ ಧೈರ್ಯ, ಚೈತನ್ಯವನ್ನು ತರುತ್ತದೆ. ಇವರ ಸಾಂತ್ವನದ ನುಡಿ ಬದುಕಿಗೆ ಭರವಸೆಯನ್ನು ತರುತ್ತದೆ.
ದಾದಿಯರ ಕೆಲಸ ಎಂದರೆ ಸುಲಭದ ಕೆಲಸವಲ್ಲ. ತಮ್ಮ ಬದುಕಿನ ಸಂಕಷ್ಟಗಳನ್ನು ನುಂಗಿಕೊಂಡು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮತ್ತೊಬ್ಬರ ಒಳಿತಿಗಾಗಿ ಜೀವನ ಮುಡಿಪಾಗಿಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದಾದಿಯರನ್ನು ಸನ್ಮಾನಿಸಲಾಯಿತು.
ಈ ವೇಳೆ ಆರೋಗ್ಯ ರಕ್ಷ ಸಮಿತಿಯ ಸದಸ್ಯರಾದ ಮುಸಿಬಾ, ಚಂದ್ರಣ್ಣ. ಯಶೋಧಮ್ಮ, ಪ್ರೇಮದಾಸ. ಮಹಿಳಾ ಮುಖಂಡರಾದ ಮಹೇಶ್ವರಿ, ಮಂಜುಳಮ್ಮ, ಮಮತಾ, ಹಿರಿಯ ಕಲಾವಿದರಾದ ಪುಟ್ಟ ಸಿದ್ದಯ್ಯ, ವನಿತಾ, ಯೋಗೀಶ ಮೊದಲಾದವರು ಇದ್ದರು.