ಬೆಂಗಳೂರು: ದೇಶದ ವಿವಿಧ ರಾಜ್ಯಗಳಲ್ಲಿ ಮತ್ತೆ ಕೋವಿಡ್ (Covid) ಮಹಾಮಾರಿಯ ಆತಂಕ ಹೆಚ್ಚಾಗಿದೆ. ರಾಜ್ಯದಲ್ಲಿ ಕೊವಿಡ್-19 ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.
ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಲ್ಲೆ ಒಟ್ಟು 35 ಕೊರೊನಾ ಪ್ರಕರಣಗಳು (Corona Case) ದಾಖಲಾಗುತ್ತಿದೆ. ಇದರಲ್ಲಿ 32 ಪ್ರಕರಣಗಳು ಬೆಂಗಳೂರಿನಲ್ಲಿ (Bengaluru) ಪತ್ತೆಯಾಗಿದ್ದು, ಇಂದು ಕೂಡಾ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ನಾಳೆಯಿಂದ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆತಂಕ ಪಡುವ ಯಾವುದೇ ಸಂದರ್ಭ ಇಲ್ಲ. ಈ ವರೆ ಕೋವಿಡ್ ಸೊಂಕು ದೃಢಪಟ್ಟಿರುವವರು ಆರೋಗ್ಯವಾಗಿದ್ದಾರೆ.
ಕೇಂದ್ರ ಸರ್ಕಾರದಿಂದ ಕೂಡ ಸೂಚನೆ ಬಂದಿದ್ದು, ಮುಂಜಾಗ್ರತೆ ಕೈಗೊಳ್ಳುವಂತೆ ಹೇಳಿದ್ದಾರೆ. ಆದಾಗ್ಯೂ ನಮ್ಮ ರಾಜ್ಯದ ಕೋವಿಡ್ ಸಮಿತಿ ಸಲಹೆಯಂತೆ ರಾಜ್ಯದಲ್ಲಿ ನಾಳೆಯಿಂದ ಮೆಡಿಕಲ್ ಕಾಲೇಜು ಆಸ್ಪತ್ರೆ, ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇನ್ನು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇದರ ಅನ್ವಯ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಚೆನ್ನಾಗಿ ನಿಯಂತ್ರಣದಲ್ಲಿದ್ದರೂ, 20 ದಿನಗಳಿಂದ ಕೋವಿಡ್ 19 ಪ್ರಕರಣಗಳಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ. ಆದ್ದರಿಂದ, ಸಾರ್ವಜನಿಕರು ಕೋವಿಡ್ 19 ಸೂಕ್ತ ನಡವಳಿಕೆಯನ್ನು (CAB) ಪೂರ್ವಭಾವಿಯಾಗಿ ಪಾಲಿಸುವುದು ಸೂಕ್ತವಾಗಿದೆ.
ಜನದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡುವಾಗ ಗರ್ಭಿಣಿಯರು, ಮಕ್ಕಳು, ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.
ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಮುಂತಾದ ಕ್ರಮಗಳನ್ನು ಸಹ ಅನುಸರಿಸಬಹುದು.
ತೀವ್ರ ಉಸಿರಾಟದ ಕಾಯಿಲೆಯ (SARI) ಲಕ್ಷಣಗಳನ್ನು ಹೊಂದಿರುವವರು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಸಕಾಲಿಕ ಚಿಕಿತ್ಸೆಗಾಗಿ ಮತ್ತು ಕೋವಿಡ್ -19 ಮತ್ತಷ್ಟು ಹರಡುವಿಕೆಯನ್ನು ಪರಿಶೀಲಿಸಲು ಆದ್ಯತೆಯ ಮೇಲೆ ಕೋವಿಡ್ ಪರೀಕ್ಷೆಗೆ ಒಳಗಾಗುವುದನ್ನು ಪರಿಗಣಿಸಬೇಕು.
ಇನ್ನು ಕೋವಿಡ್ ಸೋಂಕು ಹೆಚ್ಚಳದ ಹಿನ್ನಲೆ ಸಿಎಂ ಸಿದ್ದರಾಮಯ್ಯ ಅವರು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಸುತ್ತಿದ್ದು ಮಾಸ್ಕ್ ಧರಿಸಿ ಇಂದು ಕಾರ್ಯಕ್ರಮದಲ್ಲಿ ಭಾಗಿಯಾದರು.