ಅಹಮದಾಬಾದ್: 18ನೇ ಆವೃತ್ತಿಯ ಐಪಿಎಲ್ (IPL) ಪಂದ್ಯಾವಳಿಯ ಹೈವೋಲ್ವೇಜ್ ಫೈನಲ್ RCB vs Punjab kings ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ವಿರಾಟ್ ಕೊಹ್ಲಿಯ ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಗೆ ಮುಕ್ತಿ ಸಿಗಲಿ ಎಂಬುದು ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆ, ಕನಸು ಹಾಗೂ ಹಾರೈಕೆಯಾಗಿದೆ.
ಅಹಮದಾಬಾದ್ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಸಾವಿರಾರು ಆರ್ ಸಿಬಿ ಅಭಿಮಾನಿಗಳು ನಂ.18 ಜೆರ್ಸಿ ಧರಿಸುವುದರೊಂದಿಗೆ ಕೊಹ್ಲಿಯನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಕೊಹ್ಲಿಗೆ ಈ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಲಗ್ಗೆ ಇಡುವುದರೊಂದಿಗೆ ಈ ಬಾರಿ ಆರ್‌ಸಿಬಿ ಗೆಲ್ಲುವ ನೆಚ್ಚಿನ ತಂಡವಾಗಿ ಹೊರಹೊಮ್ಮಿದೆ.
ಈ ಸಲ ಕಪ್ ನಮೇ-ಹೌದು, ಇದು ಇಂದು-ನಿನ್ನೆ ಈ ಕೇಳುತ್ತಿರುವಂತಹ ಮಾತಲ್ಲ, ಕಳೆದ 18 ವರ್ಷಗಳ ಐಪಿಎಲ್ ಆವೃತ್ತಿ ವೇಳೆ ಕನ್ನಡಿಗರಿಂದ ಕೇಳಿ ಬರುತ್ತಿರುವ ಅಭಿ ಮಾನದ ನುಡಿ.
ಪ್ರತೀ ವರ್ಷ ಐಪಿಎಲ್ ಕ್ರಿಕೆಟ್ ಘೋಷಣೆ ಆಯಿತೆಂದರೆ ಸಾಕು, ಆರ್‌ಸಿಬಿ ಅಭಿಮಾನಿಗಳ ಮನದಾಳದ, ನಿರೀಕ್ಷೆಯ ಮಾತು ಅದೊಂದೇ. ಐಪಿಎಲ್ ಆವೃತ್ತಿ ನಡೆಯುತ್ತಿರುವ ವೇಳೆ ಆರ್‌ಸಿಬಿ ಅಪ್ಪಟ ಅಭಿಮಾನಿಗಳ ಪಾಲಿಗೆ ಅದೊಂದೇ ಮಂತ್ರ ಜಪ..!
ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡ ಅಂತಹ ದ್ದೊಂದು ವಿಶೇಷ ಕ್ರೇಜ್ ಹುಟ್ಟಿಸಿದೆ. 18 ವರ್ಷಗಳ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೀಗ 4ನೇ ಬಾರಿಗೆ ಫೈನಲ್ ತಲುಪಿರುವ ಆರ್‌ಸಿಬಿ ಇದುವರೆಗೂ ಒಮ್ಮೆಯೂ ಪ್ರಶಸ್ತಿ ಗೆಲ್ಲದೆ ಇರುವುದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಸೋಜಿಗದ ವಿಷಯ ಮತ್ತು ಅಷ್ಟೇ ನೋವಿನ ಸಂಗತಿ.
ಕಳೆದ 17 ಆವೃತ್ತಿಗಳಲ್ಲಿ ಆರ್‌ಸಿಬಿ ಒಮ್ಮೆಯೂ ಕಪ್ ಗೆಲ್ಲದಿದ್ದರೂ ಸಹ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಗಾಢ ಅಭಿಮಾನ ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲೂ ಕೂಡಾ ಉಳಿದ ಎಲ್ಲಾ ತಂಡಕ್ಕಿಂತಲೂ ಅದೆಷ್ಟೋ ಪಟ್ಟು ಫಾಲೋವರ್ಸ್ ಇರೋದು ಆರ್‌ಸಿಬಿಗೆ ಮಾತ್ರ.
ಹಾಗಾದರೆ ಐಪಿಎಲ್‌ನಲ್ಲಿ ಆರ್‌ಸಿಬಿ ಬಗ್ಗೆ ಮಾತ್ರ ಹೀಗ್ಯಾಕೆ ಅಷ್ಟೊಂದು ಕ್ರೇಜ್ ಎಂದು ಆಶ್ಚರ್ಯ ಪಡುವವರೂ ನಮ್ಮ ಮಧ್ಯೆ ಇರಬಹುದು. ಅದಕ್ಕೆ ಉತ್ತರ ತುಂಬಾ ಸರಳ, ಅದೇ ನೆಂದರೆ ಆರ್‌ಸಿಬಿ ಎಂದರೆ ಅದು ಕೇವಲ ಒಂದು ಹೆಸರು ಮಾತ್ರ ಅಲ್ಲ, ಆರ್‌ಸಿಬಿ ಎನ್ನುವುದು ಕನ್ನಡಿಗರ ಉಸಿರಲ್ಲಿ ಬೆರೆತಿದೆ.
ಆರ್‌ಸಿಬಿ ಕೇವಲ ಕನ್ನಡಿಗರ ಮಾತ್ರ ಅಲ್ಲ, ಬಹುತೇಕ ಭಾರತೀಯರ ಅಚ್ಚುಮೆಚ್ಚಿನ ತಂಡವೂ ಹೌದು. ಬೆಂಗಳೂರಿನಲ್ಲಿ ಐಪಿಎಲ್ ಟೂನಿಯ ಆರ್‌ಸಿಬಿ ಪಂದ್ಯ ಇದೆ ಎಂದರೆ ಸಾಕು, ಚಿನ್ನಸ್ವಾಮಿ ಸ್ಟೇಡಿಯಂ ಕೆಂಪು ಬಣ್ಣದಿಂದ ತುಂಬಿ ತುಳುಕುತ್ತದೆ.
‘ಈ ಸಲ ಆರ್‌ಸಿಬಿ ಟ್ರೋಫಿ ಗೆಲ್ಲದಿದ್ದರೆ ನಾನು ನನ್ನ ಹೆಂಡತಿಗೆ ವಿಚ್ಚೇದನ ಕೊಡ್ತೀನಿ..’ ಎಂಬ ಗಂಡನ ಹೇಳಿಕೆ.
‘ಆರ್‌ಸಿಬಿ ಗೆದ್ದರೆ ನಾವು ಫ್ಯಾನ್ಸ್ ಹಬ್ಬ ಮಾಡ್ಕೊತೀವಿ, ರಜಾ ಕೊಡಿ ಮುಖ್ಯಮಂತ್ರಿಗಳೇ..’ ಅಪ್ಪಟ ಅಭಿಮಾನಿಯ ಪ್ರೀತಿ ಪೂರ್ವಕ ಕೋರಿಕೆ, ಈ ಹೇಳಿಕೆ ಹಲವರಿಗೆ ಒಮ್ಮೊಮ್ಮೆ ತೀರಾ ಬಾಲಿಶ ಅನಿಸಬಹುದು, ಆದರೆ ಆರ್‌ಸಿಬಿ ತಂಡ ಮತ್ತು ಅಭಿಮಾನಿಗಳ ಮಧ್ಯೆ ಬಲವಾದ ಭಾವನೆಗಳ ಬಾಂಧ ವ್ಯದ ಬೆಸುಗೆ ಇದೆಂದು ಯೋಚಿಸುವವರಿಗೆ ಇಂತಹ ಹೇಳಿಕೆ ಗಳು ತಪ್ಪೇನಲ್ಲ ಎಂದೂ ಅರ್ಥಮಾಡಿಕೊಂಡವರಿದ್ದಾರೆ.
ಕಿಡಿಗೇಡಿಗಳ ಪೋಸ್ಟ್

ಇಂದು ನಡೆಯುವ ಪಂದ್ಯಕ್ಕೆ ಅಭಿಮಾನಿಗಳ ತಪನೆ ಒಂದೆಡೆಯಾದರೆ, ಕಿಡಿಗೇಡಿಗಳ ಹಾವಳಿ ಮತ್ತೊಂದೆಡೆ, RCB vs PK ವಿರುದ್ಧದ ಪಂದ್ಯದ ವಿರುದ್ಧ ಅವಹೇಳನಕಾರಿಯಾಗಿ ಸ್ಟೇಟಸ್ ಪೋಸ್ಟ್ ಮಾಡುವ ಮೂಲಕ, RCB, ಪಂಜಾಬ್ ಕಿಂಗ್ಸ್ ಅಭಿಮಾನಿಗಳನ್ನು ಕೆರಳಿಸುತ್ತಿದ್ದಾರೆ.
ಇದು ಇಂದು ರಾತ್ರಿ ನಡೆಯುವ ಪಂದ್ಯದ ವೇಳೆ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕೂಡಲೇ ಪೊಲೀಸ್ ಇಲಾಖೆ ಎಚ್ಚೆತ್ತು ಇಂತಹ ಕಿಡಿಗೇಡಿಗಳಿಗೆ ವಾರ್ನಿಂಗ್ ನೀಡಬೇಕಿದೆ.