ದೊಡ್ಡಬಳ್ಳಾಪುರ; ನಗರದ ಪ್ರತಿಷ್ಠಿತ ಶಾಲೆಗಳಾದ ನಳಂದ ಪ್ರೌಢಶಾಲೆ ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆ (World Environment Day) ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ದಿನ ಪರಿಸರ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ಅವರು ಗಿಡ ನೆಟ್ಟು, ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಪರಿಸರ ದಿನಾಚರಣೆ ಜೂನ್ 5 ಮಾತ್ರವಲ್ಲದೆ ನಮ್ಮ ಜೀವನದ ಭಾಗವಾಗಿ ಸದಾ ಕಾಲ ಪರಿಸರ ರಕ್ಷಣೆ ಮಾಡುವುದರ ಬಗ್ಗೆ ನಮ್ಮ ಚಿಂತನೆ ಹಾಗೂ ಕಾಯಕವಾಗಬೇಕು ಎಂದರು.

ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಥೀಮ್ ನಂತೆ ಪ್ಲಾಸ್ಟಿಕ್ ಮಾಲಿನ್ಯವನ್ನು ಅಂತ್ಯ (putting an end to plastic pollution) ಗೊಳಿಸುವ ಬಗ್ಗೆ ಪ್ರತಿಯೊಬ್ಬರೂ ಯೋಚಿಸಿ ಪ್ಲಾಸ್ಟಿಕ್ ಬ್ಯಾಗ್, ಬಾಟಲ್, ತಟ್ಟೆ, ಚಮಚ, ತಿಂಡಿ ಬಾಕ್ಸ್ ಗಳ ಬದಲಿಗೆ ಬಟ್ಟೆ ಚೀಲಗಳು, ಸ್ಟೀಲ್ ಬಾಟಲ್ ,ಚಮಚ, ತಟ್ಟೆ, ತಿಂಡಿ ಬಾಕ್ಸ್ ಗಳನ್ನು ಉಪಯೋಗಿಸಿ ಹಂತ ಹಂತವಾಗಿ ಏಕ ಬಳಕೆ ಪ್ಲಾಸ್ಟಿಕ್ ಮಾರಿಯಿಂದ ಬಿಡುಗಡೆ ಹೊಂದುವಂತೆ ಸಂದೇಶ ನೀಡಿದರು.
ಖ್ಯಾತ ಪರಿಸರ ಲೇಖಕರಾದ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ “ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ.. ಆದರೆ ನಾವು ಪ್ರಕೃತಿಯ ಒಂದು ಭಾಗ ಅಷ್ಟೇ” ಎಂಬ ಪ್ರಜ್ಞೆ ನಮ್ಮಲ್ಲಿರಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಸೋಮವಾರದಿಂದ ಪ್ರತಿದಿನವೂ ಪರಿಸರ ಜಾಗೃತಿಯ ಕುರಿತಂತೆ ಗಿಡ ಬೆಳೆಸುವುದು, ಲೀಫ್ ಕ್ರಾಫ್ಟ್, ಪರಿಸರ ಗೀತೆಗಳನ್ನು ಹಾಡುವುದು, ಪರಿಸರ ಜಾಗೃತಿ ಬಗ್ಗೆ ವರ್ಣ ಚಿತ್ರ ಬಿಡಿಸುವುದು ಹಾಗೂ ಪರಿಸರದ ಬಗ್ಗೆ ವಿವಿಧ ವೇಷಭೂಷಣಗಳ ಪ್ರದರ್ಶನಗಳನ್ನು ಶಾಲೆಗಳಲ್ಲಿ ಏರ್ಪಡಿಸಲಾಗಿತ್ತು.
ಪರಿಸರ ಮಾಲಿನ್ಯದಿಂದಾಗುವ ಅನಾಹುತಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಚಿಸಿದ್ದ ಬೃಹತ್ ವರ್ಣ ಚಿತ್ರಗಳನ್ನು ಪ್ರದರ್ಶಿಸಲಾಯಿತು.

ಶಾಲಾ ವಿದ್ಯಾರ್ಥಿಗಳು ತಾವೇ ಬೆಳೆದ ಗಿಡಗಳನ್ನು ಜೋಡಿಸಿ ಹಸಿರೇ ಉಸಿರು ಮತ್ತು ಗೋ ಗ್ರೀನ್ (Go Green )ಎಂದು ಸಂದೇಶವನ್ನು ಸಾರಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಶಾಲೆಗಳ ಮುಖ್ಯ ಶಿಕ್ಷಕರಾದ ಸುನಿತಾ ಪಿ, ಅನಿತಾ ಕೆ ಪಿ, ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.