ಬೆಂಗಳೂರು: IPL ಕಪ್ ಗೆದ್ದ RCB ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಅನಾಹುತ ತಡೆಯಬಹುದಾದ ದುರಂತವಾಗಿತ್ತು, ತುರ್ತು ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿ ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ.
ಈ ಕುರಿತಂತೆ ಟ್ಚಿಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಅನಾಹುತ ತಡೆಯಬಹುದಾದ ದುರಂತವಾಗಿತ್ತು. ಜನಸಂದಣಿ ನಿರ್ವಹಣೆ, ಭದ್ರತೆ ಮತ್ತು ಅಗತ್ಯ ಸೌಲಭ್ಯಗಳಲ್ಲಿನ ಸ್ಪಷ್ಟ ಲೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಹೊಣೆಗಾರಿಕೆ ಸ್ಥಾಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತುರ್ತು ಮಧ್ಯಸ್ಥಿಕೆ ವಹಿಸಬೇಕೆಂದು ಕೋರಿ ಪತ್ರ ಬರೆದಿದ್ದೇನೆ.
ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಇಂತಹ ಘಟನೆಗಳು ಮುಂದೆಂದೂ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಸಂವೇದನಾರಹಿತ, ಬೇಜವಾಬ್ದಾರಿ ಧೋರಣೆ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯ ಪ್ರವೇಶ ಅನಿವಾರ್ಯವಾಗಿದೆ ಎಂದಿದ್ದಾರೆ.