ದೊಡ್ಡಬಳ್ಳಾಪುರ: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ʼಆಶಾಕಿರಣ ದೃಷ್ಟಿ ಕೇಂದ್ರ’ಕ್ಕೆ (‘Asha Kirana Eye Care’) ಇಂದು ಚಾಲನೆ ನೀಡಲಾಯಿತು.
ರಾಜ್ಯದಾದ್ಯಂತ ಇಂದು 393 ಕಡೆ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಗೋವಿಂದರಾಜನಗರದ ಎಂ.ಸಿ ಲೇಔಟ್ ನಲ್ಲಿ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ʼಆಶಾಕಿರಣ ದೃಷ್ಟಿ ಕೇಂದ್ರʼವನ್ನು ಗುರುವಾರ ಉದ್ಘಾಟಿಸಿದರು.
ಈ ಹಿನ್ನೆಲೆಯಲ್ಲಿ ಇಂದು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಶಾಕಿರಣ ದೃಷ್ಟಿ ಕೇಂದ್ರವನ್ನು ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ದೃಷ್ಟಿದೋಷ ನಿವಾರಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ‘ಆಶಾಕಿರಣ’ ಯೋಜನೆಯನ್ನು ಮರುವಿನ್ಯಾಸಗೊಳಿಸಲಾಗಿದೆ.
ಶಾಶ್ವತ ಪರಿಹಾರಕ್ಕಾಗಿ ನಿರಂತರ ಕಣ್ಣಿನ ಆರೋಗ್ಯ ಸೇವೆ ಒದಗಿಸುವ ‘ಆಶಾಕಿರಣ ದೃಷ್ಟಿ ಕೇಂದ್ರಗಳನ್ನು’ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗುತ್ತಿದೆ.
ಸಾರ್ವಜನಿಕರು ಕೇಂದ್ರಗಳಿಗೆ ಭೇಟಿ ನೀಡಿ ಕಣ್ಣಿನ ತಪಾಸಣೆ ನಡೆಸಿಕೊಂಡು, ದೃಷ್ಟಿ ದೋಷ ಇರುವವರು ಉಚಿತ ಕನ್ನಡಕಗಳನ್ನು ಪಡೆಯಬಹುದು ಎಂದರು.
ಈ ಸಂದರ್ಭದಲ್ಲಿ ನೇತ್ರತಜ್ಞರಾದ ಡಾ.ಅರುಣ್ ಕುಮಾರ್, ನೇತ್ರಾಧಿಕಾರಿ ಡಾ.ಶಿವಪ್ರಸಾದ್, ಎಆರ್‌ಎಸ್ ಸದಸ್ಯರಾದ ನಾಗರತ್ನಮ್ಮ, ಮಂಜುನಾಥ್, ಪ್ರೇಮದಾಸ್, ಚಂದ್ರಶೇಖರ್, ಮುಜಿಬಾ, ಯಶೋಧ ಮತ್ತಿತರರಿದ್ದರು.