ದೊಡ್ಡಬಳ್ಳಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜುಲೈ.5, 6 ರಂದು ನಡೆದ ತೃತೀಯ ಪರೀಕ್ಷೆಯಲ್ಲಿ ನಗರದ ಪ್ರತಿಷ್ಠಿತ ಶಾಲೆಗಳಾದ ನಳಂದ ಪ್ರೌಢಶಾಲೆ (Nalanda High School) ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಯ (Little Angels Anantha School) ಸುಮಾರು 216 ವಿದ್ಯಾರ್ಥಿಗಳು ಜಿಲ್ಲೆಯ ಇನ್ನಿತರ ವಿದ್ಯಾರ್ಥಿಗಳ ಜೊತೆ ಯಶಸ್ವಿಯಾಗಿ ಭಾಗವಹಿಸಿದ್ದರು.

ಪರೀಕ್ಷಾ ಕಾರ್ಯ ಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಟಿ ಎಸ್ ನವರು ಉದ್ಘಾಟಿಸಿ, ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ನ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿನಿತ್ಯವೂ ಸಂವಿಧಾನದ ಪೀಠಿಕೆಯನ್ನು ಪ್ರಾರ್ಥನೆಯ ರೀತಿ ಹೇಳುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕರೆ ನೀಡಿ ಪರೀಕ್ಷಾ ವಿದ್ಯಾರ್ಥಿಗಳೆಲ್ಲರೂ ತೃತೀಯ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಮಿಷನರ್ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ಪ್ರಸಾದ್, ಉಪ ಜಿಲ್ಲಾ ಕಮಿಷನರ್ ವೆಂಕಟರಾಜು, ತಾಲೂಕು ಅಧ್ಯಕ್ಷ ಅಂಜನಪ್ಪ, ಕೋಆರ್ಡಿನೇಟರ್ ನಿಹಾಲ್, ಗೈಡ್ಸ್ ಲೀಡರ್ ಗೌರಾ ಬಾಯಿ, ವನಜಾಕ್ಷಿ, ಪುಷ್ಪ, ಮುನಿಸಿದ್ದಮ್ಮ, ವೆಂಕಟೇಶ್, ಶ್ರೀನಿವಾಸ್ ಹಾಗೂ ಇನ್ನಿತರ ಸ್ಕೌಟ್ಸ್ ಮತ್ತು ಗೈಡ್ಸ್ ಮುಖಂಡರು ಹಾಜರಿದ್ದರು.

ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ ನ ಪ್ರಕೃತಿಯ ಮಡಿಲಲ್ಲಿ ವಿದ್ಯಾರ್ಥಿಗಳೆಲ್ಲರೂ ಮೌಖಿಕ ಹಾಗೂ ಬರವಣಿಗೆಯ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಟೆಂಟ್ ಕಟ್ಟುವುದು, ಗಂಟುಗಳನ್ನು ಹಾಕುವುದು, ಮಾರ್ಗ ಕಂಡು ಹಿಡಿಯುವುದು, ಸ್ಕೌಟ್ಸ್ ಮತ್ತು ಗೈಡ್ಸ್ ಉದ್ದೇಶ, ಶಪಥ, ಸಲ್ಯೂಟ್ ಮುಂತಾದವುಗಳ ಪರೀಕ್ಷೆಯು ನಡೆಯಿತು.

ಒಟ್ಟಾರೆ ಮಕ್ಕಳೆಲ್ಲರೂ ನಿಸರ್ಗದ ಮಡಿಲಲ್ಲಿ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಿ ಅತ್ಯಂತ ಉತ್ಸಾಹದಿಂದ ತಮ್ಮ ಪರೀಕ್ಷಾ ಶಿಬಿರವನ್ನು ಯಶಸ್ವಿಗೊಳಿಸಿದರು ಎಂದು ಶಾಲೆಯ ಮುಖ್ಯ ಶಿಕ್ಷಕಿ ಸುನಿತಾ.ಪಿ. ತಿಳಿಸಿದರು.
