ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಇತ್ತೀಚೆಗೆ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಪದಗ್ರಹಣ ಹಾಗೂ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ನಡೆಯಿತು.
ಶಾಲಾ ಹಂತದ ಚುನಾವಣೆಯಲ್ಲಿ ಆಯ್ಕೆಯಾದ ವಿವಿಧ ಗುಂಪಿನ ನಾಯಕ ನಾಯಕಿಯರಿಗೆ ಹಾಗೂ ನಾಲ್ಕೂ ಹೌಸ್ ನ ನಾಯಕ-ನಾಯಕಿಯರಿಗೆ ಬ್ಯಾಡ್ಜ್ ಅನ್ನು ವಿತರಿಸುವುದರ ಮೂಲಕ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕ್ಯಾಪ್ಟನ್ ಶ್ರೀನಿವಾಸ್ ಎನ್ ಮಾತನಾಡಿ,“ ಈ ಭಾಗದ ಉನ್ನತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿರುವ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ವ್ಯಾಸಂಗ ಮಾಡಿದ ಮಕ್ಕಳು ಅವರ ಸರ್ವತೋಮುಖ ಬೆಳವಣಿಗೆಯ ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.
ಮಕ್ಕಳ ಪ್ರೀತಿಯ ಮತಗಳಿಂದ ಆಯ್ಕೆಯಾದ ನಾಯಕರು ತಮ್ಮಲ್ಲಿ ಶಿಸ್ತು, ಸಂಯಮ, ತಾಳ್ಮೆ, ಶುಚಿತ್ವ, ಜವಾಬ್ದಾರಿ, ಕರ್ತವ್ಯಗಳನ್ನು ಮೈಗೂಡಿಸಿಕೊಂಡು ಎಲ್ಲಾ ವಿದ್ಯಾರ್ಥಿಗಳಲ್ಲಿ ಮೌಲ್ಯ ಬಿತ್ತುವ ವ್ಯಕ್ತಿತ್ವ ನಿಮ್ಮದಾಗಬೇಕು. ನಿಮ್ಮ ಬಾಳಲ್ಲಿ ಸದಾ ಘನಾತ್ಮಕ ಚಿಂತನೆಗೆ ಒಳಗಾಗಬೇಕು. ಋಣಾತ್ಮಕ ಅಂಶಗಳು ನಮ್ಮ ಹತ್ತಿರ ಸುಳಿಯದಂತೆ ವಿದ್ಯಾರ್ಥಿ ಜೀವನ ಸಾಗಬೇಕು, ಆಗ ಮಾತ್ರ ಭವಿಷ್ಯದ ಜೀವನ ಸುಂದರವಾಗಿರಲು ಸಾಧ್ಯವಾಗುತ್ತದೆ.” ಎಂದು ತಿಳಿಸಿದರು.

ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಎ. ಸುಬ್ರಮಣ್ಯ ಅವರು ಮಾತನಾಡಿ, ನಮ್ಮ ಶಾಲೆಯಲ್ಲಿ ಚುನಾವಣೆಯನ್ನು ಹಮ್ಮಿಕೊಂಡು ನಾಯಕರನ್ನು ಆಯ್ಕೆ ಮಾಡಿರುವುದು ಹಾಗೂ ಹದಿನೆಂಟು ವರ್ಷ ತುಂಬುವ ಒಳಗಾಗಿ ಮಕ್ಕಳಲ್ಲಿ ಚುನಾವಣಾ ಪ್ರಕ್ರಿಯೆ ಹೇಗೆ ನಡೆಯುವುದು ಎಂಬುದನ್ನು ಪ್ರಾಯೋಗಿಕವಾಗಿ ಚುನಾವಣೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಪೂರ್ವಭಾವಿಯಾಗಿ ಚುನಾವಣಾ ಪ್ರಕ್ರಿಯೆಯ ಅರಿವನ್ನು ಮೂಡಿಸಿರುವ ಕಾರ್ಯ ಶ್ಲಾಘ್ಹನೀಯವಾದುದು ಎಂದರು
ದೈಹಿಕ ಶಿಕ್ಷಕರಿಂದ ತರಬೇತಿ ಪಡೆದ ವಿದ್ಯಾರ್ಥಿಗಳ ಶಿಸ್ತುಬದ್ಧವಾದ ಕವಾಯತು, ನೃತ್ಯ ಗಾಯನ, ನಾಟಕ ಮುಂತಾದ ಮನರಂಜನಾ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆಯಿತು.

ಶಾಲಾ ನಾಯಕ ಭುವನ್ ಇ, ಶಾಲಾ ಉಪನಾಯಕ ಎಂ.ಆರ್.ಚಿರಂತ್ ನಾಗ್ ಗೌಡ, ಶಾಲಾ ನಾಯಕಿ ಎಸ್, ರೋಷಿನಿ, ಶಾಲಾ ಉಪನಾಯಕಿ ಹಂಸಿಕಾ. ಶಾಲಾ ಸಾಂಸ್ಕೃತಿಕ ನಾಯಕ ಗೌರವ್, ಶಾಲಾ ಸಾಂಸ್ಕೃತಿಕ ನಾಯಕಿ ದೇವಾನಂದ ಆರ್., ಕ್ರೀಡಾ ನಾಯಕ ಚಂದನ್ ಆರ್., ಹಾಗೂ ಕ್ರೀಡಾ ನಾಯಕಿ ಹರ್ಷಿತಾ ಎಂ.. ಮೊದಲಾದವರನ್ನು ಒಳಗೊಂಡಂತೆ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಪ್ರದಾನ ಮಾಡಲಾಯಿತು.

ಇದೇ ವೇಳೆ ಕಳೆದ ಸಾಲಿನಲ್ಲಿ ನಡೆದ ಒಲಂಪಿಯಾಡ್ ಝೋನಲ್ ಹಂತದ ಪರೀಕ್ಷೆಯ ವಿಜೇತ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾಧ್ಯಕ್ಷರಾದ ಎ. ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್.ಎಸ್., ಪ್ರಾಂಶುಪಾಲರಾದ ರೆಮ್ಯ.ಬಿ.ವಿ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇದ್ದರು.
