ದೊಡ್ಡಬಳ್ಳಾಪುರ: ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ (Guarantee scheme) ಶಕ್ತಿ ಯೋಜನೆಯ ಸಂಭ್ರಮಾಚರಣೆ ನಡೆಯುತ್ತಿದೆ.

ಅಂತೆಯೆ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿವತಿಯಿಂದ ದೊಡ್ಡಬಳ್ಳಾಪುರ ನಗರದ KSRTC ಬಸ್ ನಿಲ್ದಾಣದಲ್ಲಿ ಬಸ್ ಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಬಸ್ ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಸಿಹಿ ಹಂಚಿ ಸಂಭ್ರಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ಗ್ಯಾರಂಟಿ ಯೋಜನೆಗಳ (Guarantee scheme) ಅನುಷ್ಟಾನ ಸಮಿತಿ ಅಧ್ಯಕ್ಷ ಎನ್.ವಿಶ್ವನಾಥ್ ರೆಡ್ಡಿ, ದೊಡ್ಡಬಳ್ಳಾಪುರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಸದಸ್ಯ ಅಂಜನ ಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಆದರೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡದೇ ಇರುವ ಕುರಿತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಹೌದು ಕಾಂಗ್ರೆಸ್ ಕಾರ್ಯಕರ್ತರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವರ್ತನೆಯ ವಿರುದ್ಧ ಕೆರಳಿದ್ದಾರೆ. ಬೇಕಿದ್ದಾಗ ಬಳಸಿಕೊಳ್ಳುತ್ತಾರೆ, ಬಳಿಕ ತಾತ್ಸರ ಮಾಡುತ್ತಾರೆ. ನಮಗ್ಯಾರಿಗೂ ಮಾನ್ಯತೆ ನೀಡುತ್ತಿಲ್ಲ. ಬಿಳಿ ಬಟ್ಟೆ ತೊಟ್ಟವರಿಗೆ ಮಾತ್ರ ಮಾನ್ಯತೆ ಎಂಬಂತಾಗಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಪಕ್ಷ ಸಂಘಟನೆ ಮಾಡುತ್ತಿಲ್ಲ. ಅವರ ಅನುಕೂಲಕ್ಕೆ ಮಾತ್ರ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ವ್ಯಾಪಕವಾಗುತ್ತಿದೆ.
ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸಿದ್ದೇವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿಯ ಆಸೆ, ಆಮಿಷಗಳಿಂದಾಗಿ ನಮ್ಮ ಅಭ್ಯರ್ಥಿಗೆ ಹಿನ್ನಡೆಯಾಗಿದೆಯೇ ಹೊರತು ಕಾರ್ಯಕರ್ತರು ಹೊಣೆಯಲ್ಲ.
ಆದರೆ ಇದನ್ನೇ ಕಾರಣವಾಗಿಟ್ಟುಕೊಂಡು ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದಲ್ಲಿ ಮಾನ್ಯತೆಯೇ ಇಲ್ಲವೆಂಬಂತೆ ತಾತ್ಸಾರದಿಂದ ನೋಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.
ಇನ್ನೂ ಇವತ್ತಿನ ಕಾರ್ಯಕ್ರಮದ ಕುರಿತು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರಾದ ತಳಗವಾರ ಪುನೀತ್ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಕೆಲವೇ ಕೆಲವು ಮುಖಂಡರಿಗೆ ಸೀಮಿತವಾದ ದೊಡ್ಡಬಳ್ಳಾಪುರ ಶಕ್ತಿ ಯೋಜನೆ ಸಂಭ್ರಮ ಎಂದು ಬರೆದಿದ್ದಾರೆ.
ಈ ಪೊಸ್ಟ್ಗೆ ಶಕ್ತಿ ಯೋಜನೆ ಮಾತ್ರವಲ್ಲ, ದೊಡ್ಡಬಳ್ಳಾಪುರ ಕಾಂಗ್ರೆಸ್ ಸಮಿತಿ ಕೆಲವೇ ನಾಯಕರಿಗೆ ಸೀಮಿತವಾಗಿದೆ, ನಿಷ್ಠಾವಂತ ಕಾರ್ಯಕರ್ತರ ಲೆಕ್ಕದಲ್ಲಿ ಇಲ್ಲಾ ಹಿಂದುಳಿದ ವರ್ಗದವರ ಕಡಗಣನೆ, ಇದೇನಿದು ಅಸಮಾಧಾನದ ಹೊಗೆ, ಕೆಲವು ಹೊಸ ಮುಖಗಳಿಗೆ ಮಾತ್ರ ಅಧ್ಯತೆ ಎಂಬಂತೆ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.