ದೊಡ್ಡಬಳ್ಳಾಪುರ: ನಗರದ ಕನ್ನಡ ಜಾಗೃತ ಭವನದಲ್ಲಿ ಛಲವಾದಿ ಮಹಾಸಭಾದ ವತಿಯಿಂದ 2024-25ನೇ ಸಾಲಿನ ಎಸ್ಎಸ್ಎಲ್‌ಸಿ (SSLC)ಮತ್ತು ಪಿಯುಸಿಯಲ್ಲಿ (PUC) ಅತಿ ಹೆಚ್ಚು ಅಂಕ ಪಡೆದ ಛಲವಾದಿ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಬೋದಿವೃಕ್ಷಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆ ಮಾಡಿದ ಛಲವಾದಿ ಮಹಾಸಭಾದ ರಾಜ್ಯಧ್ಯಕ್ಷರಾದ ಶ್ರೀ ವಾಣಿ ಕೆ. ಶಿವರಾಮ್ ಮಾತನಾಡಿದರು.
ಕಡುಬಡತನದ ವಾತಾವರಣದಲ್ಲಿ ಹುಟ್ಟಿಬೆಳೆದು, ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಕೊಂಡು, ಇಡೀ ಕರ್ನಾಟಕದಲ್ಲೇ ಮೊದಲಿಗರಾಗಿ, ಕನ್ನಡ ಭಾಷೆಯಲ್ಲಿ ಐಎಎಸ್ ಪರೀಕ್ಷೆಯನ್ನು ಪಾಸು ಮಾಡಿ, ಉನ್ನತ ಅಧಿಕಾರಿಯಾಗಿ, ಬಹುತೇಕ ಬಡವರಿಗಾಗಿ ಉತ್ತಮ ಸೇವೆಯನ್ನು ನೀಡಿ, ಉತ್ತಮ ಸಮಾಜಸೇವಕರಾಗಿ ಖ್ಯಾತಿಗಳಿಸಿದ ಕೆ.ಶಿವರಾಮ್ ರವರನ್ನು ಛಲವಾದಿ ಸಮುದಾಯದ ವಿದ್ಯಾರ್ಥಿಗಳು ಅನುಸರಿಸುವ ಮೂಲಕ ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು ಎಂದ ಅವರು ಛಲವಾದಿ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗವಹಿಸಿ, ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಡಾ ದೇವರಾಜ್, ಎಲ್ಲಾ ಸಮಾಜದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸಲು ಉತ್ತಮವಾದ ವಾತಾವರಣ ಕಲ್ಪಿಸಿಕೊಡುವುದಲ್ಲದೇ, ವಿದ್ಯಾರ್ಥಿಗಳ ಕಡೆಗೆ ಹೆಚ್ಚು ಗಮನ ವಹಿಸಬೇಕಿದೆ.
ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹೆಚ್ಚು ಕಾಳಜಿ ವಹಿಸಬೇಕಿದೆ ಎಂದು ಕಿವಿ ಮಾತು ಹೇಳಿದ ಅವರು ಸರ್ಕಾರವು ಸಮಾಜ ಕಲ್ಯಾಣ ಇಲಾಖೆವತಿಯಿಂದ ಉನ್ನತ ಶಿಕ್ಷಣಕ್ಕಾಗಿ sc/st ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ಕೋಟಿ ರೂಪಾಯಿಗಳವರೆಗೆ ಪ್ರೋತ್ಸಾಹ ಧನ ನೀಡುತ್ತಿದೆ. ಈ ಯೋಜನೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸುತ್ತಾ, ಸರ್ಕಾರದ ಯೋಜನೆಗಳ ಕುರಿತು ವಿವರಣೆ ನೀಡಿದರು.
ಆಕಾಶವಾಣಿ ಕಾರ್ಯಕ್ರಮ ಗಳ ನಿರ್ಮಾಪಕರು ಹಾಗೂ ನಿವೃತ್ತ ನಿರ್ದೇಶಕರು ಮತ್ತು ಕವಿಗಳು, ಚಿಂತಕರೂ ಆದ “ಸುಬ್ಬು ಹೊಲೆಯಾರ್ ” ಮಾತನಾಡಿ, ನಮ್ಮನ್ನ ಆಳುತ್ತಿರುವ ಸರ್ಕಾರಗಳು ನೈಜ ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುವ ಶಿಕ್ಷಣದ ದಿಕ್ಕನ್ನೇ ಬದಲಾಯಿಸಿ, ಪುರಾತನ ಕಾಲದ ಶಿಕ್ಷಣ ಪದ್ದತಿಯ ಕಡೆಗೆ ಎಳೆದು ತರುವ ಪ್ರಯತ್ನ ನಡೆಸಲಾಗುತ್ತಿದೆ. ಇದು ನಿಲ್ಲಬೇಕು?. ಮೌಲ್ಯಯುತ ಶಿಕ್ಷಣದ ಕಡೆಗೆ ಗಮನ ಹರಿಸಬೇಕು ಎಂದ ಅವರು ಇತ್ತೀಚಿಗೆ ಕೃತಕ ಬುದ್ದಿಮತ್ತೆಯಂತಹ ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳು ನೋಡುತ್ತಿರುವುದನ್ನು ಗಮನಿಸಿದ್ದೆನೇ. ಇದರ ಕಡೆಗೆ ಹೆಚ್ಚು ಗಮನ ನೀಡದೆ, ಎಲ್ಲಾ ಮಾಹಿತಿಗಳಿಗೂ ಮೊಬೈಲ್ ಗಳ ಮೊರೆ ಹೋಗದೇ, ವಿಕ್ಷಣೆ ನಿಲ್ಲಿಸಿ, ಒಳ್ಳೆಯದನ್ನಷ್ಟೇ ಉಪಯೋಗಿಸಿಕೊಂಡು, ಒಂದು ದಿನಕ್ಕೆ ಕನಿಷ್ಠ ಐದು ಗಂಟೆಗಳ ಕಾಲ ಓದಿನ ಕಡೆಗೆ ಗಮನ ಹರಿಸಬೇಕು ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಛಲವಾದಿ ಸಮುದಾಯದ ವಿದ್ಯಾರ್ಥಿಗಳಿಗೆ ಶ್ರೀ ದೀಪಂಕರ ಮೈತ್ರೆಯ ಸೋಷಿಯಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ವತಿಯಿಂದ ಪುರಸ್ಕೃತ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆ ನೀಡಿ, ಪ್ರೋತ್ಸಾಹಿಸಲಾಯಿತು.
ಛಲವಾದಿ ಮಹಾಸಭಾ ದೊಡ್ಡಬಳ್ಳಾಪುರ ಘಟಕದ ಅಧ್ಯಕ್ಷಸಿ. ಗುರುರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೋಲಿಗೆರೆಯ ನಿವೃತ್ತ ಅಭಿಯಂತರರಾದ ಕುಮಾರಸ್ವಾಮಿ ಮತ್ತು ಹೊಸಕೋಟೆಯ ಸಾದರಬೀದಿಯ ಮುರಳಿ ವೇದಿಕೆಯಲ್ಲಿದ್ದರು.
ಕಾರ್ಯಕ್ರಮವನ್ನು ಹಿರಿಯರಾದ ಬಿ. ದೊಡ್ಡರಂಗಪ್ಪ ನಿರೂಪಿಸಿದರೆ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಿ ಎನ್ ಎಲ್ ಎನ್ ಮೂರ್ತಿ ಸ್ವಾಗತಿಸಿ, ವಂದಿಸಿದರು.
ಉಪಾಧ್ಯಕ್ಷರಾದ ಕೊನಘಟ್ಟದ ಎ. ಮುನಿಕೃಷ್ಣ ಪ್ಪ, ಗೂಳ್ಯ ಮುನಿದಾಸಪ್ಪ, ಸಕ್ಕರೆ ಗೊಲ್ಲಹಳ್ಳಿಯ ಹನುಮಂತಯ್ಯ, ಆರೂಢಿಯ ಲಕ್ಷ್ಮೀಪತಿ, ಕೃಷ್ಣಪ್ಪ, ದೊಡ್ಡಬೆಳವಂಗಲ ಹೋಬಳಿ ಘಟಕದ ಎನ್. ಉದಯಶಂಕರ್, ಮಧುರೆ ಹೋಬಳಿಯ ವೆಂಕಟೇಶ್, ತೂಬಗೆರೆಯ ವೆಂಕಟೇಶ್,ದಯಾನಂದ, ಶಂಕರ್ ಕಚೇರಿಪಾಳ್ಯ,ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮೇನಕಮ್ಮ, ಹಮಾಮ್ ರತ್ನಮ್ಮ,ಲಕ್ಷ್ಮಣ, ಗಂಟಿಗಾನಳ್ಳಿಯ ಮುನಿಯಮ್ಮ, ರವಿ, ಕೊನಘಟ್ಟದ ಹರೀಶ್ ಮತ್ತು ಸಂಗಡಿಗರು ಹಾಗೂ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.