ದೊಡ್ಡಬಳ್ಳಾಪುರ: ಗ್ಯಾರಂಟಿ ಯೋಜನೆಗಳ (Guarantee scheme) ಅನುಷ್ಟಾನ ಸಮಿತಿವತಿಯಿಂದ ನಗರದ KSRTC ಬಸ್ ನಿಲ್ದಾಣದಲ್ಲಿ ಬಸ್ ಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಬಸ್ ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಬಳಿಕ ಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಈವರೆಗೆ ರಾಜ್ಯದಾದ್ಯಂತ ಸುಮಾರು 500ಕೋಟಿ ಮಹಿಳಾ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆದಿರುವುದು ಸಂತಸದ ಸಂಗತಿಯಾಗಿದೆ.
ಮಹಿಳೆಯರು, ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಬಸ್ಪ್ರಯಾಣದ ಸೌಲಭ್ಯ ಕಲ್ಪಿಸುವ ಶಕ್ತಿ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಹಾಗೂ ನಾಡಿನ ನಾರಿಯರ ಸಬಲೀಕರಣಕ್ಕೆ ಪುಷ್ಠಿ ನೀಡಿದೆ. ರಾಜ್ಯದಾದ್ಯಂತ ಪ್ರತಿದಿನ ಸುಮಾರು 50-60ಲಕ್ಷ ಮಹಿಳೆಯರಿಗೆ ಈ ಯೋಜನೆಯ ಲಾಭ ದೊರೆಯುತ್ತಿದೆ.
ಕಾಂಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಗೃಹಜ್ಯೋತಿ, ಯುವನಿಧಿ ಈ ರೀತಿಯ ಯೋಜನೆಗಳನ್ನು ಹಿಂದಿನ ಯಾವ ಸರ್ಕಾರವು ಮಾಡಿರಲಿಲ್ಲ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಎನ್ ವಿಶ್ವನಾಥ್ ರೆಡ್ಡಿ ಮಾತನಾಡಿ, ಶಕ್ತಿ ಯೋಜನೆಯ ಕುರಿತು ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಅಧ್ಯಯನಗಳು ನಡೆದಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ನೆರೆಯ ರಾಜ್ಯಗಳೂ ಕೂಡ ಈ ಯೋಜನೆಯನ್ನು ಮಾದರಿಯಾಗಿ ಇಟ್ಟುಕೊಂಡು ಅನುಷ್ಠಾನಕ್ಕೆ ಮುಂದಾಗಿರುವುದು ಯೋಜನೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
ಒಟ್ಟಾರೆಯಾಗಿ ಶಕ್ತಿ ಯೋಜನೆ ಮಹಿಳೆಯರ ಆರ್ಥಿಕ ಶಕ್ತಿಗೆ ನವಚೈತನ್ಯ ತುಂಬಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದ ಅವರು, ಕಾಲಕಾಲಕ್ಕೆ ಬೆಲೆ ಏರಿಕೆಯ ಬಿಸಿ, ನಿರುದ್ಯೋಗ ಮತ್ತಿತರ ಹಲವು ಕಾರಣಗಳಿಂದಾಗಿ ಸಂಕಷ್ಟದಲ್ಲಿದ್ದ ಜನರ ಸ್ಥಿತಿಗತಿಗಳನ್ನು ಅರಿತು, ಆಡಳಿತಾರೂಢ ಸರ್ಕಾರವು ಜನರ ಆರ್ಥಿಕ, ಸಾಮಾಜಿಕ ಚೈತನ್ಯವನ್ನು ಹೆಚ್ಚಿಸುವ ಸದುದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯ ಎಂಬ ಹೊಸ ಆರ್ಥಿಕ ಪ್ರಮೇಯವನ್ನು ಅಳವಡಿಸಿಕೊಂಡು ಶಕ್ತಿ ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬಸ್ ಚಾಲಕ, ನಿರ್ವಾಹಕರಿಗೆ ಹಾಗೂ ಡಿಪೋ ವ್ಯವಸ್ಥಾಪಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ಸದಸ್ಯ ಅಂಜನ ಮೂರ್ತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಪಿ ಜಗನಾಥ್, ಕೆಪಿಸಿಸಿ ಸದಸ್ಯ ಹೇಮಂತ್ ರಾಜ್, ಕಸಬ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್, ನಗರಸಭೆ ನಾಮಿನಿ ಸದಸ್ಯ ಅಖಿಲೇಶ್, ಕಾಂತರಾಜ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರೇವತಿ ಅನಂತ್ ರಾಮ್, ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಶ್ರೀನಗರ ಬಶೀರ್, ಮುಖಂಡರಾದ ಆದಿತ್ಯ ನಾಗೇಶ್, ನೂರುಲ್ಲಾ, ಕೆಎಸ್‌ಆರ್ಟಿಸಿ ವ್ಯವಸ್ಥಾಪಕ ರಾಘವ ಮತ್ತಿತರರಿದ್ದರು.