ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ರವಿ ತೇಜ (Ravi Teja) ಅವರ ತಂದೆ ರಾಜಗೋಪಾಲ್ ರಾಜು (Rajagopal Raju) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಹೈದರಾಬಾದ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜಗೋಪಾಲ್ ರಾಜು ಅವರು ನಿನ್ನೆ ರಾತ್ರಿ ಹೈದರಾಬಾದ್ ನಲ್ಲಿರುವ ರವಿ ತೇಜ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ ರಾಜ್ಯ ಲಕ್ಷ್ಮಿ ಮತ್ತು ರವಿತೇಜ ಸೇರಿದಂತೆ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಸದ್ಯ ಮನೆಯಲ್ಲಿ ರಾಜಗೋಪಾಲ್ ರಾಜು ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಕುಟುಂಬ ಸದಸ್ಯರು, ಚಲನಚಿತ್ರೋದ್ಯಮದ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಬೆಳಗ್ಗೆಯಿಂದ ನಟನ ಮನೆಗೆ ಆಗಮಿಸುತ್ತಿದ್ದು ಅಂತಿಮ ಗೌರವ ಸಲ್ಲಿಸುತ್ತಿದ್ದಾರೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಜನಿಸಿದ ರಾಜಗೋಪಾಲ್ ರಾಜು ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡಿದ್ದಾರೆ.
ತಮ್ಮ ವೃತ್ತಿಪರ ಜೀವನದಿಂದಾಗಿ ಬಹುಪಾಲು ದಿನಗಳನ್ನು ಉತ್ತರ ಭಾರತದಲ್ಲಿ ಕಳೆದಿದ್ದಾರೆ. ಹಾಗಾಗಿ, ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮೊದಲು ರವಿ ತೇಜ ಅವರು ಜೈಪುರ, ದೆಹಲಿ ಮತ್ತು ಮುಂಬೈ ಸೇರಿದಂತೆ ವಿವಿಧ ನಗರಗಳಲ್ಲಿ ವಾಸಿಸಿದ್ದರು.
ಸದ್ಯ ರಾಜಗೋಪಾಲ್ ರಾಜು ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಕುಟುಂಬ ಸದಸ್ಯರು ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಇನ್ನು ಕಳೆದ 2017 ರಲ್ಲಿ ರವಿ ತೇಜ ಅವರ ಎರಡನೇ ಸಹೋದರ ಅಪಘಾತದಲ್ಲಿ ಮೃತಪಟ್ಟಿದ್ದರು.