ಬೆಂಗಳೂರು: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ (LKG, UKG) ತರಗತಿಗಳನ್ನ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ ಮಾಡಲು 2 ಕೊಠಡಿಗಳ ಅಗತ್ಯವಿದೆ. ರಾಜ್ಯದಲ್ಲಿ ಈ ರೀತಿ 2 ಕೊಠಡಿಗಳಿರುವ 10 ಸಾವಿರ ಅಂಗನವಾಡಿ ಕೇಂದ್ರಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ.
ಸದ್ಯ 4 – 5 ಸಾವಿರ ಅಂಗನವಾಡಿಗಳಲ್ಲಿ ತರಗತಿಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲಾ ಕೇಂದ್ರಗಳಲ್ಲಿ ಆರಂಭ ಮಾಡಲಾಗುವುದು ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ 233 ಅಂಗನವಾಡಿ ಕೇಂದ್ರಗಳನ್ನ ಇಲಾಖೆ ಪಟ್ಟಿ ಮಾಡಿದ್ದು, ಈ ಕೇಂದ್ರಗಳಲ್ಲಿ ಅಂಗನವಾಡಿ ಇಲಾಖೆ ಆರಂಭಿಸಲಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರತ್ಯೇಕ ಇಲಾಖೆಯಾಗಿ ರೂಪುಗೊಂಡು ಅಕ್ಟೋಬರ್ 2 ಕ್ಕೆ 50 ವರ್ಷಗಳನ್ನ ಪೂರೈಸುತ್ತದೆ. ಈ ನಿಟ್ಟಿನಲ್ಲಿ ಅಕ್ಟೋಬರ್‌ನಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸಲು ಇಲಾಖೆ ನಿರ್ಧಾರ ಮಾಡಿದೆ. ಹಾಗೆಯೇ, ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ತರಬೇತಿ ನೀಡಿದ್ದು, ಪುಸ್ತಕಗಳನ್ನ ಸಹ ಕೊಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ, ಉಳಿದ ಕಡೆ ಹೊಸದಾಗಿ ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಶಿಕ್ಷಣ ನೀಡುವ ಬಗ್ಗೆ ತಜ್ಞರ ಸಮಿತಿ ರಚನೆ ಮಾಡಲಾಗಿತ್ತು. ಅದರ ಅನುಸಾರ ಇದೀಗ ಎಲ್‌ಜಿ ಹಾಗೂ ಯುಕೆಜಿ ಆರಂಭಿಸಲು ನಿರ್ಧಾರ ಮಾಡಲಾಗಿದೆ.
ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ನಡೆಸಲು 2 ಕೊಠಡಿಗಳ ಅಗತ್ಯವಿದೆ. ರಾಜ್ಯದಲ್ಲಿ ಇಂತಹ ಕೊಠಡಿಗಳುಳ್ಳ 10 ಸಾವಿರ ಅಂಗನವಾಡಿ ಕೇಂದ್ರಗಳನ್ನು ಗುರುತಿಸಲಾಗಿದೆ. ಸದ್ಯ 4 – 5 ಸಾವಿರ ಅಂಗನವಾಡಿಗಳಲ್ಲಿ ತರಗತಿಗಳನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಕೇಂದ್ರಗಳಿಗೆ ವಿಸ್ತರಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ… pic.twitter.com/w2N0FLg1AZ
— DIPR Karnataka (@KarnatakaVarthe) July 17, 2025
ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ. ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಠಿಕ ಆಹಾರ ನೀಡುವುದೇ ನಮ್ಮ ಉದ್ದೇಶ. ಈ ಕಾರಣಕ್ಕೆ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿಗಳು ಸಹಮತ ವ್ಯಕ್ತಪಡಿಸಿದ್ದಾರೆ.
ಇಲಾಖೆಯ ಮೂಲಕವೇ ಮಕ್ಕಳಿಗೆ ಸಮವಸ್ತ್ರ ಪುಸ್ತಕ, ಬ್ಯಾಗ್ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಶಾಲೆಗಳ ಮಾದರಿಯಲ್ಲೇ ವರ್ಗಾವಣೆ ಪತ್ರ (ಟಿಸಿ) ನೀಡಲು ಕ್ರಮ ವಹಿಸಲಾಗುವುದು ಎಂದು ಹೆಬ್ಬಾಳಕರ್ ಹೇಳಿದ್ದಾರೆ.