Harithalekhani: ಧರ್ಮರಾಜನು ರಾಜ್ಯವಾಳುತ್ತಿದ್ದ ಕಾಲದಲ್ಲಿ ಎಲ್ಲೆಲ್ಲೂ ಸುಖ ಸಂತೋಷಗಳು ತಾಂಡವಾಡುತ್ತಿದ್ದವು. ಪ್ರಜೆಗಳು ಬಂದು ರಾಜನ ಬಳಿ ಯಾವುದೇ ವಿಧವಾದ ಸಹಾಯವನ್ನು ಕೇಳಿದರೂ ತಕ್ಷಣವೇ ನೆರವೇರುತ್ತಿತ್ತು. ಯಾರೂ ಬರಿಗೈಯಲ್ಲಿ ತಿರುಗಿ ಹೋದದ್ದು ಇಲ್ಲವೇ ಇಲ್ಲ.
ಒಮ್ಮೆ ಒಬ್ಬ ಬ್ರಾಹ್ಮಣ ಯಾವುದೋ ಒಂದು ದಾನ ಕೇಳುತ್ತಾ ಧರ್ಮರಾಜನ ಬಳಿಗೆ ಹೋಗಿದ್ದನು. ಆದರೆ ಆತನು ವಾಪಸ್ ಬರುವಾಗ ಮಾತ್ರ ಬರಿಗೈಯಲ್ಲಿ ಬರುತ್ತಿದ್ದನು ಅದನ್ನು ಗಮನಿಸಿದ ಭೀಮಸೇನನು ಅವನನ್ನು ತನ್ನ ಬಳಿ ಕರೆದು
‘ಸ್ವಾಮೀ, ತಾವು ಏನನ್ನೋ ಕೇಳುವುದಕ್ಕಾಗಿ ರಾಜನ
ಬಳಿಗೆ ಹೋಗಿದ್ದರಿ. ಆದರೆ ವಾಪಾಸು ಬರುವಾಗ ಮಾತ್ರ ಬರಿಗೈಯಲ್ಲಿ ಬರುತ್ತಿದ್ದೀರಿ. ಯಾಕೆ ಬರಿಗೈಯಲ್ಲಿ ವಾಪಾಸಾಗುತ್ತಿದ್ದೀರಿ?’ ಏಕೆ ತಾವು ಮಹಾರಾಜರನ್ನು ಭೇಟಿಯಾಗಲಿಲ್ಲವೇ? ಪ್ರಭುಗಳು ಏನು ಕೊಡಲಿಲ್ಲವೇ ಎಂದು ಕೇಳಿದನು”.
ಆಗ ಆತನು ಅವರ ಬಳಿ ನಾನು ಕೇಳಿದ ವಸ್ತು ಇರಲಿಲ್ಲ. ಅದಕ್ಕಾಗಿ ನಾಳೆ ಬರಲು ತಿಳಿಸಿದ್ದಾರೆ. ನಾಳೆ ಅದನ್ನು ತರಿಸಿ ಇಟ್ಟಿರುತ್ತಾರೆ. ಹಾಗಾಗಿ ನಾನು ನಾಳೆ ಬರುತ್ತೇನೆ’ ಎಂದನು.
ಧರ್ಮರಾಜನಿಂದ ಭೀಮಸೇನನು ಇಂತಹ ಉತ್ತರವನ್ನು ನಿರೀಕ್ಷಿಸಿರಲಿಲ್ಲ. ‘ಇಂದು ಮಾಡಬೇಕಾದಕೆಲಸವನ್ನು ಇಂದೆಯೇ ಮಾಡಬೇಕು. ಅದನ್ನು ನಾಳೆಯ ದಿನಕ್ಕೆ ಮುಂದೂಡುವುದೆಂದರೇನು. ಇಂತಹ ವಿಷಯ ಅಣ್ಣನ ಅರಿವಿಗೇಕೆ ಬರಲಿಲ್ಲ?” ಹೀಗೆ ಯೋಚಿಸಿದ ಭೀಮಸೇನನು ಬ್ರಾಹ್ಮಣನನ್ನು ಹೋಗದಂತೆ ತಡೆದು ಅಲ್ಲೇ ನಿಲ್ಲಿಸುತ್ತ ಮಹಾರಾಜನ ಅರಮನೆಯ ಬಳಿಯಿರುವ ಒಂದು ದೊಡ್ಡ
ಗ೦ಟೆಯನ್ನು ಜೋರಾಗಿ ಬಾರಿಸತೊಡಗಿದ.
ಮಹಾರಾಜನ ಬಳಿ ಇರುವ ಈ ಗಂಟೆಯನ್ನು ಯಾವಾಗಲೂ ಬಾರಿಸುವುದಿಲ್ಲ. ಕೆಲವೊಂದು
ವಿಶಿಷ್ಟ ಸಂದರ್ಭಗಳಲ್ಲಿ ಅಂದರೆ ಅತಿ ಪ್ರಾಮುಖ್ಯವಾದ ಘಟನೆಗಳು ನಡೆದಾಗ ಮಾತ್ರ ಅದನ್ನು ಜನರ ಗಮನಕ್ಕೆ ತರಲು ಬಾರಿಸಲಾಗುತ್ತಿತ್ತು. ಹಾಗಾಗಿ ಈ ಗಂಟೆಯ ಸಪ್ಪಳವನ್ನು ಕೇಳಿದಾಗ ಎಲ್ಲಾ ಪ್ರಜೆಗಳೂ ತಮ್ಮ ತಮ್ಮ ಕೆಲಸಗಳನ್ನು ಅಲ್ಲಲ್ಲಿಯೇ ನಿಲ್ಲಿಸಿ ಮಹಾದ್ವಾರದ ಕಡೆಗೆ ವಿಷಯ ತಿಳಿಯಲು ನುಗ್ಗಿ ಬರುತ್ತಿದ್ದರು.
ಈ ದಿನವಂತೂ ಭೀಮಸೇನನೇ ಆ ಗಂಟೆಯನ್ನು ಜೋರಾಗಿ ಬಾರಿಸುತ್ತಿದ್ದುದರಿಂದ ಪ್ರಜೆಗಳೆಲ್ಲಾ
ಮಹಾದ್ವಾರದ ಕಡೆಗೆ ದೌಡಾಯಿಸತೊಡಗಿದರು. ಅಷ್ಟೇ ಅಲ್ಲ ಧರ್ಮರಾಜ, ಅರ್ಜುನ, ನಕುಲ ಸಹದೇವರ ಸಹಿತ ದೌಪದಿಯೂ ಆ ಸ್ಥಳಕ್ಕೆ ಓಡೋಡಿ ಬಂದರು. ಅವರಾರ ಬರವನ್ನೂ ಲೆಕ್ಕಿಸದೇ ಭೀಮಸೇನನು ತಡೆಯಿಲ್ಲದೇ ತುಂಬಾ ಆವೇಶ ಬಂದವನಂತೆ ಆ ಗಂಟೆಯನ್ನು ಬಾರಿಸುತ್ತಲೇ
ಇದ್ದನು.
ಆಗ ಅಲ್ಲಿಗೆ ಆಗಮಿಸಿದ ಧರ್ಮರಾಯನು ಭೀಮಸೇನನನ್ನು ತಡೆಯುತ್ತ, ‘ನಿಲ್ಲಿಸು,- ಭೀಮಸೇನ. ಯಾರಿಗೆ ಅನ್ಯಾಯವಾಗಿದೆ ಎಂದು ಈ ರೀತಿ ಗಂಟೆಯನ್ನು ಬಾರಿಸುತ್ತಿದ್ದೀಯ. ಈ ಗಂಟೆಯ ಸಪ್ಪಳವನ್ನು ಕೇಳಿ ನಮ್ಮ ಜೊತೆಗೆ ಊರಿನ ಪ್ರಜೆಗಳೂ ಬಂದು ಸೇರಿದ್ದಾರೆ. ನೀನು
ಈ ರೀತಿ ಗಂಟೆಯನ್ನು ಬಾರಿಸಲು ಕಾರಣವೇನು?’ ಎಂದು ಕೇಳಿದನು.
ಭೀಮಸೇನನು, “ಒಂದು ಸಂತಸ ಸುದ್ದಿಯನ್ನು ಹೇಳಲಿದ್ದೇನೆ” ಎಂದನು. ನಂತರ ಅವನು ಅಣ್ಣನಾದ ಧರ್ಮರಾಜನು ಪಾದಗಳಿಗೆ ನಮಸ್ಕರಿಸುತ್ತ ಅಲ್ಲಿ ನೆರೆದಿದ್ದ ಪ್ರಜೆಗಳ ಕಡೆಗೆ ತಿರುಗಿ, “ನಮ್ಮ ಅಣ್ಣನು ದೊಡ್ಡ ವಿಜಯವನ್ನು ಸಂಪಾದಿಸಿದ್ದಾನೆ. ತಾವೆಲ್ಲರೂ ಆ ವಿಷಯವನ್ನು ಕೇಳಿದ ಮೇಲೆ ನನಗಿಂತ ಹೆಚ್ಚಿನ ಸಂತೋಷವನ್ನು ಪಡುವಿರಿ. ಹಾಗೆಯೇ ನಾವೆಲ್ಲರೂ ಅಣ್ಣನ ಸಂತೋಷದಲ್ಲಿ ಪಾಲ್ಗೊಳ್ಳೋಣ’ಎಂದನು.
ಅವನ ಮಾತುಗಳನ್ನು ಕೇಳಿ ಉಳಿದವರ ವಿಷಯ ಹಾಗಿರಲಿ, ಸ್ವತಃ ಧರ್ಮರಾಜನಿಗೆ ಈ ವಿಷಯ ಅರ್ಥವಾಗಲಿಲ್ಲ. ಈ ದಿನ ಆತನು ಅರಮನೆಯನ್ನು ಬಿಟ್ಟು ಹೊರಕ್ಕೇ ಹೋಗಿರಲಿಲ್ಲ. ಯಾರೊಡನೆಯೂ
ಯುದ್ಧ ಮಾಡಿರಲಿಲ್ಲ. ಅಂತಹುದರಲ್ಲಿ ವಿಜಯವನ್ನು ಸಂಪಾದಿಸುವುದಾದರೂ ಹೇಗೆ? ಹಾಗಾಗಿ ಅವನು ಆಶ್ಚರ್ಯದಿಂದ ಭೀಮಸೇನನ ಕಡೆಗೆ ತಿರುಗಿ ನೋಡುತ್ತ, “ಅರೆ! ಭೀಮಸೇನ ಇದೇನು. ಹೇಳುತ್ತಿರುವಿ? ನಾನಿಂದು ಅರಮನೆಯಿಂದ ಹೊರಕ್ಕೇ ಹೋಗಿಲ್ಲ. ಯಾವ ಯುದ್ಧದಲ್ಲೂ ಭಾಗವಹಿಸಿಲ್ಲ. ಅಂತಹುದರಲ್ಲಿ ಯಾವ ಜಯ? ಎಲ್ಲಿ ಸಂಪಾದಿಸಿರುವೆ? ನಿನಗೇನಾದರೂ ಕನಸು ಬಿದ್ದಿದೆಯಾ?’ ಎಂದು ಕೇಳಿದನು.
ಆಗ ಭೀಮಸೇನನು ನಗುತ್ತ, “ಪ್ರಭು, ಇಂದು ಬ್ರಾಹ್ಮಣನೋರ್ವನು ತಮ್ಮ ಬಳಿಗೆ ಬಂದು ಯಾವುದೋ ಒಂದು ವಸ್ತುವನ್ನು ಕೇಳಿದಾಗ ಆ ವಸ್ತು ತಮ್ಮ ಬಳಿ ಇಲ್ಲವೆಂದೂ ನಾಳೆಯ ದಿನ ತರಿಸಿ
ಕೊಡುವುದಾಗಿಯೂ ತಿಳಿಸಿದರಂತೆ. ಅಂದರೆ ನಾಳೆಯ ದಿನದ ತನಕ ತಾವು ಬದುಕಿರುವುದಾಗಿಯೂ ಹಾಗೂ ಆ ಬ್ರಾಹ್ಮಣನೂ ಬದುಕಿ ಉಳಿಯುವುದರ ಬಗ್ಗೆ ತಮಗೆ ಖಾತ್ರಿ ಇದೆ ಎಂದಂತಾಯಿತು. ಆದರೆ ಹುಟ್ಟು ಸಾವಿನ ಬಗ್ಗೆ ಯಾರಿಗೂ ಖಾತ್ರಿಯಾಗಿ ಹೇಳಲಾಗುವುದಿಲ್ಲ. ಆದರೆ ತಾವು ಹೇಳುತ್ತಿರುವಿರಿ ಎಂದರೆ ತಾವು ಜಯಿಸಲಸಾಧ್ಯವಾದ ಸಾವನ್ನೂ ಜಯಸಿರುವಿರಿ ಎಂದರ್ಥವಲ್ಲವೇ? ಹಾಗಾಗಿ ಇದೊಂದು ಭಾರೀ ವಿಜಯವಲ್ಲವೇ?’ ಎಂದು ಕೇಳಿದನು.
ಭೀಮಸೇನನ ಮಾತುಗಳನ್ನು ಕೇಳಿದಾಗ ಧರ್ಮರಾಜನಿಗೆ ತನ್ನ ತಪ್ಪಿನ ಅರಿವಾಯಿತು. ತನ್ನ ತಮ್ಮನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತ, `ಭೀಮಸೇನ, ನಿಜ ನಿಜ ನೀನು ಹೇಳುತ್ತಿರುವುದು ನಿಜ.
ನೀನು ಸರಿಯಾದ ಸಮಯದಲ್ಲಿ ನನ್ನ ಕಣ್ಣುಗಳನ್ನು ತೆರೆಸಿದ್ದೀಯ. ಹುಟ್ಟು ಸಾವಿನ ಬಗ್ಗೆ ಯಾರೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹಾಗಾಗಿ ನಾಳೆ ಮಾಡುವುದನ್ನು ಇಂದೇ ಮಾಡಬೇಕು. ಇಂದು ಮಾಡುವುದನ್ನು ಈಗಲೇ ಮಾಡಬೇಕು ಬ್ರಾಹ್ಮಣದಾನ ಕೇಳಿದಾಗ ನಾನು ಅಲ್ಲೇ ನೀಡಬೇಕಿತ್ತು. ಆ ರೀತಿಯಲ್ಲಿ ಹಾಗೇ ಬರಿಗೈಯಲ್ಲಿ ಕಳಿಸಬಾರದಾಗಿತ್ತು. ಒಳ್ಳೆಯ ಕೆಲಸಗಳನ್ನು ಮಾಡುವಾಗ ತಕ್ಷಣವೇ ಮಾಡಬೇಕು. ಅದನ್ನು ಎಂದಿಗೂ ಮುಂದಕ್ಕೆ ಹಾಕಬಾರದು’ ಎಂದನು.
ಮುಂದೆ ತಡ ಮಾಡದೆ ಊರಿಗೆ ಹೊರಡಲು ತಯಾರಾಗಿದ್ದ ಆ ಬ್ರಾಹ್ಮಣನನ್ನು ತಕ್ಷಣವೇ ಕರೆಸಿ, ಅವನನ್ನು ಸತ್ಕರಿಸಿ, ಅವನು ಕೇಳಿದ ಎಲ್ಲಾ ವಸ್ತುವನ್ನು ಅಂದೇ ಕೊಟ್ಟು ಕಳುಹಿಸಿದನು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)