ಬೆಂಗಳೂರು: ವೈದ್ಯರು ರೋಗಿಗಳನ್ನು ಸಹಾನುಭೂತಿಯಿಂದ ಕಾಣಬೇಕು. ಉಚಿತ ಚಿಕಿತ್ಸೆ ಇರುವುದರಿಂದ ಒತ್ತಡವೂ ಹೆಚ್ಚಿರುತ್ತದೆ. ವೈದ್ಯರು ಸಹನೆಯಿಂದ ಕೆಲಸ ಮಾಡಬೇಕು. ಯಾರ ಬಳಿಯೂ ಹಣ ಪಡೆಯಬಾರದು ಎಂದು ವೈದ್ಯರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm siddaramaiah) ತಿಳಿಸಿದರು.
ಅವರು ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೊಪ್ಪಳ ಕಾರ್ಯಕ್ರಮ ಇಂದು ಮಳೆ ಕಾರಣದಿಂದ ತೆರಳಲಿಲ್ಲ. ಆದ್ದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ಇಂದು ಅನಿರೀಕ್ಷಿತ ಭೇಟಿ ನೀಡಲಾಗಿದೆ ಎಂದರು.
ಪರಿಶೀಲನೆ: ಆಸ್ಪತ್ರೆಯಲ್ಲಿ ವಾಹನ ನಿಲುಗಡೆಗೆ ಹಣ ಪಡೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಸರ್ಕಾರದ 108 ಆಂಬ್ಯುಲೆನ್ಸ್ ಲಭ್ಯ
ಖಾಸಗಿ ಆಂಬ್ಯುಲೆನ್ಸ್ ಅವರ ದಂಧೆ ನಡೆಯುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಸರ್ಕಾರದ 108 ಆಂಬ್ಯುಲೆನ್ಸ್ ದೊರೆಯುತ್ತದೆ ಎಂದರು.
ದಿನಕ್ಕೆ 40 ಕ್ಕೂ ಹೆಚ್ಚು ಹೆರಿಗೆಗಳು
ವಾಣಿ ವಿಲಾಸ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಗೆ ಸಹ ಭೇಟಿ ನೀಡಿದ್ದು, ವಾಣಿ ವಿಳಾಸದಲ್ಲಿ ಒಂದು ದಿನಕ್ಕೆ 40 ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಬೇರೆ ಬೇರೆ ರಾಜ್ಯದ ಜನರು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಜನ ದಟ್ಟಣೆ ಹೆಚ್ಚಿರುವುದರಿಂದ ಆಸ್ಪತ್ರೆಯ ಹಾಸಿಗೆಗಳನ್ನು ಹೆಚ್ಚು ಮಾಡಬೇಕಿದೆ. ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಲವಾರು ರೋಗಿಗಳನ್ನು ಭೇಟಿ ಮಾಡಿ ಮಾತನಾಡಿಸಿದೆ. ಡಾಕ್ಟರ್ ಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ, ಊಟ ಚೆನ್ನಾಗಿದೆ ಎಂದು ಹೇಳಿದರು. ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗಕ್ಕೆ ಭೇಟಿ ನೀಡಿದ್ದೇನೆಂ ಅಂಗಾಂಗ ದಾನಕ್ಕೆ ಹೊರಗೆ 30 ರಿಂದ 40 ಲಕ್ಷ ವೆಚ್ಚವಾಗುತ್ತದೆ. ಇಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದರು.
300 ಹಾಸಿಗೆಗಳ ಆಸ್ಪತ್ರೆ
120 ಹಾಸಿಗೆಗಳ ಆಸ್ಪತ್ರೆಯನ್ನು 300 ಹಾಸಿಗೆಗಳಿಗೆ ಹೆಚ್ಚಿಸುವ ಬಗ್ಗೆ ಬೇಡಿಕೆಯಿದೆ. ಈ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದ್ದು ಇದನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಆಸ್ಪತ್ರೆಯಲ್ಲಿ ಸಮಸ್ಯೆಗಳು ಕಂಡುಬರಲಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಜನರು ಸಮಸ್ಯೆಗಳನ್ನು ಹೇಳಲಿಲ್ಲ. ಕೆಲವರು ಆಸ್ಪತ್ರೆಗೆ ದಾಖಲಾಗಬೇಕೆಂದು ತಿಳಿಸಿದರು ಎಂದರು.