ನೆಲಮಂಗಲ: ಅಧಿಕಾರಿಗಳ ಮೇಲೆ ಕಾಂಗ್ರೆಸ್ ಶಾಸಕರ ದೌರ್ಜನ್ಯ, ದಬ್ಬಾಳಿಕೆ ಮಿತಿ ಮೀರಿದೆ. ಕಾಂಗ್ರೆಸ್ ಸರ್ಕಾರ 1800 ಕೋಟಿ ರೂ. ಲೂಟಿಗೆ ನೆಲಮಂಗಲ ಕೆರೆ ಕಟ್ಟೆಗಳಿಗೆ ಕೊಳಚೆ ನೀರನ್ನು ಹರಿಸಲು ಹೊರಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಾಗ್ದಾಳಿ ನಡೆಸಿದರು.
ಯಾವುದೇ ಕಾರಣಕ್ಕೂ ನೆಲಮಂಗಲದ ಕೆರೆಗಳಿಗೆ ವೃಷಭಾವತಿ ಕೊಳಚೆ ನೀರು ಹರಿಸಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ದೇವೇಗೌಡರು ಹಾಗೂ ಕುಮಾರಣ್ಣ ಅವರ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.
ನೆಲಮಂಗಲದ ಎಂವಿಎಂ ಕನ್ವೆನ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿಗೆ ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದಾರೆ ಅದೇ ರೀತಿ ನೆಲಮಂಗಲದಲ್ಲಿ ಅಧಿಕಾರಿಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ. ಹೆದರಿಸಿ ಬೆದರಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಶ್ರೀನಿವಾಸಯ್ಯ ವಿರುದ್ಧ ಕಿಡಿಕಾರಿದರು.
ಕುಮಾರಣ್ಣನವರಿಗೆ ಅಧಿಕಾರ ಇದ್ದರೂ, ಇಲ್ಲದಿದ್ದರೂ ಅಧಿಕಾರಿಗಳನ್ನ ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಜನರು ಸಮಸ್ಯೆಗಳ ಬಗ್ಗೆ ಕರೆ ಮಾಡಿದಾಗ ಅವರಿಗೆ ಸಕಾರಾತ್ಮಕವಾಗಿ ಕುಮಾರಣ್ಣ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಕುಮಾರಣ್ಣವರು ಎಂದು ಕೂಡ ವರ್ಗಾವಣೆಗೆ ಹಣವನ್ನ ಪಡೆದಿಲ್ಲ, ಇಷ್ಟು ಕೋಟಿ ಕೊಡಿ ನಿಮಗೆ ಪೋಸ್ಟಿಂಗ್ ಕೊಡ್ತೀನಿ ಎಂದು ದೇವೇಗೌಡರು , ಕುಮಾರಣ್ಣ ಹಾಗೂ ಜೆಡಿಎಸ್ ಪಕ್ಷ ಕೆಟ್ಟತನದ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ಶಾಸಕರುಗಳಿಗೇ ಅವರ ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ. ಇತ್ತೀಚೆಗೆ ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಅವರು ಮುಂದೆ ಯಾವ ಪಕ್ಷಕ್ಕೆ ಹೋಗಬೇಕೆಂದು ಲೆಕ್ಕಚಾರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ಇದಕ್ಕಿಂತ ಸಾಕ್ಷಿ ಬೇಕಾ.? ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನ ಸಂಪೂರ್ಣವಾಗಿ ಕರ್ನಾಟಕದಿಂದ ಕಿತ್ತೆಸೆಯುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ಲೂಟಿ ಮಾಡುತಿದ್ದರೆ ಎಂದು ವಾಗ್ದಾಳಿ ನಡೆಸಿದರು
ವೃಷಭಾವತಿ ನದಿ ಪೈಪ್ಲೈನ್ ಯೋಜನೆಗೆ 1800 ಕೋಟಿ ದಾಖಲೆ ಪ್ರಮಾಣದ ಪರ್ಸೆಂಟೇಜ್ ಇದು. ಹಲವಾರು ಸರ್ಕಾರಗಳು ಕರ್ನಾಟಕ ರಾಜ್ಯದಲ್ಲಿ ಆಡಳಿತ ಮಾಡಿರುವುದನ್ನು ನೋಡಿದ್ದೇವೆ. ಬೆಂಗಳೂರು ನಗರದ ಕೊಳೆಚೆ ನೀರನ್ನ ಇವತ್ತು 69 ಕೆರೆಗಳನ್ನ ತುಂಬಿಸಲು ಈ ಯೋಜನೆಯನ್ನ ಮೂಡಿಟ್ಟಿದ್ದಿರೋ, ಇಲ್ಲ ನಿಮ್ಮ ಜೇಬು ಗಳಿಗೆ ದುಡ್ಡು ತುಂಬಿಸಿಕೊಳ್ಳುವುದಕ್ಕಾ ಎಂದು ವಾಗ್ದಾಳಿ ನಡೆಸಿದರು.
ವೃಷಭಾವತಿ ಪೈಪ್ ಲೈನ್ ಯೋಜನೆ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದಾರೆ. ನೆಲಮಂಗಲ ತಾಲೂಕಿನ ಜನತೆಗೆ ಮೋಸ ಮಾಡುತ್ತಿದ್ದಾರೆ ಇದರಿಂದ ನಿಮ್ಮ ಜೇಬು ಬರ್ತಿಯಾಗುತ್ತೆ. ಆದರೆ ತಾಲೂಕಿನ ಜನತೆಯ ಪರಿಸ್ಥಿತಿ ಏನಾಗುತ್ತೆ.? 69 ಕೆರೆಗಳಿಗೆ ಕೊಳಚೆ ನೇರನ್ನ ತುಂಬಿಸಿದರೆ
ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳನ್ನ ತಾಲೂಕಿನ ಜನತೆ ನೋಡಬೇಕಾಗುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
1800 ಕೋಟಿ ಪೈಪ್ ಲೈನ್ ಅಂತ ನಾಟಕವಾಡುತಿದ್ದೀರಾ.? ಶಾಸಕರಾಗಿದ್ದೀರ, ಅವಕಾಶ ಸಿಕ್ಕಿದೆ. ಒಳ್ಳೆಯ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ಆದರೆ ಈ ರೀತಿ ವರ್ತನೆ ಮಾಡುತ್ತೀರಾ ಅಂದರೆ ಮುಂದಿನ ದಿನಗಳಲ್ಲಿ ದೇವೇಗೌಡರು ಹಾಗೂ ಕುಮಾರಣ್ಣ ಅವರ ನೇತೃತ್ವದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸಿದ ವೇಳೆ ತಾಲ್ಲೂಕಿನ ಜನತೆ ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕುವ ಮೂಲಕ ಸ್ವಾಗತಿಸಿ ನಂತರ ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಬೈಕ್ ರ್ಯಾಲಿಯ ಮೂಲಕ ಪಟ್ಟಣಕ್ಕೆ ಆಗಮಿಸಿದ ಯುವ ನಾಯಕರಿಗೆ ದಾರಿಯುದ್ದಕ್ಕೂ ಸಾರ್ವಜನಿಕರು ಪಟಾಕಿ ಸಿಡಿಸಿ ಹೂವಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎ. ಮಂಜುನಾಥ್ ರವರು, ಮಾಜಿ ವಿಧಾನಪರಿಷತ್ ಸದಸ್ಯರಾದ ಈ. ಕೃಷ್ಣಪ್ಪ ರವರು, ತಾಲ್ಲೂಕು ಅಧ್ಯಕ್ಷರಾದ ತಿಮ್ಮರಾಯಪ್ಪ, ಮುಖಂಡರಾದ ಜಯಣ್ಣ, ಭೈರೇಗೌಡ , ಶಿವರುದ್ರಣ್ಣ, ಮೋಹನ್ ಕುಮಾರ್ ಸೇರಿದಂತೆ ಅನೇಕರಿದ್ದರು.