Harithalekhani: ಒಂದು ಊರಿನ ಬಳಿ ದಟ್ಟವಾದ ಕಾಡು ಇತ್ತು. ಆ ಕಾಡಿನಲ್ಲಿ ಒಂದು ಹುಲಿ ಮತ್ತು ಸಿಂಹ ಇತ್ತು.
ಒಂದು ದಿನ ಹುಲಿಗೆ ಹಸಿವು ಆಗಿತ್ತು. ಹುಲಿ ಆಹಾರವನ್ನು ಹುಡುಕಿಕೊಂಡು ನದಿ ದಂಡೆಯ ಹತ್ತಿರ ಬಂದಿತು. ಅಲ್ಲಿ ಸಿಂಹ ಜಿಂಕೆಯನ್ನು ಕೊಂದು ತಿನ್ನುತ್ತಿತ್ತು. ಅದನ್ನು ಹುಲಿ ನೋಡಿತು. ಹುಲಿಗೂ ತಿನ್ನಬೇಕೆಂದು ಆಸೆ ಹುಟ್ಟಿತು.
ಹುಲಿ ಸಿಂಹವನ್ನು, ‘ನನಗೂ ಬಹಳ ಹಸಿವೆಯಾಗಿದೆ. ಸ್ವಲ್ಪ ಆಹಾರವನ್ನು ತಿನ್ನಲು ಕೊಡು’ ಎಂದು ಕೇಳಿತು.
ಸಿಂಹ ‘ಆಯಿತು ತಿನ್ನು ಬಾರೋ ಗೆಳೆಯ’ ಎಂದು ಹುಲಿಗೆ ಹೇಳಿತು.
ಸಿಂಹ ಸರಿಯಿತು. ಹುಲಿಯೂ ಆಹಾರ ತಿಂದಿತು. ಹುಲಿ ಸಿಂಹಕ್ಕೆ ‘ಧನ್ಯವಾದ ಸಿಂಹಣ್ಣ’ ಎಂದು ಹೇಳಿತು.
ಒಂದು ವಾರದ ನಂತರ ಒಂದು ದಿನ ಸಿಂಹಕ್ಕೂ ತುಂಬಾ ಹಸಿವೆಯಾಗಿತ್ತು. ಅದು ಆಹಾರವನ್ನು ಹುಡುಕಿಕೊಂಡು ಹೊರಟಿತು. ಆಗ ಹುಲಿ ಕಾಣಿಸಿತು. ಅದು ಮೊಲವನ್ನು ಕೊಂದು ತಿನ್ನುತ್ತಿತ್ತು. ಅದನ್ನು ನೋಡಿ ಅಲ್ಲಿಗೆ ಸಿಂಹ ಬಂದಿತು.
ಸಿಂಹ ಹುಲಿಗೆ, ‘ನನವೂ ಸ್ವಲ್ಪ ಆಹಾರ ಕೊಡು’ ಎಂದು ಕೇಳಿತು.
ಆದರೆ ಹುಲಿ, ‘ಹೋಗೋ, ನನಗೆ ಸ್ವಲ್ಪ ಆಹಾರ ಇದೆ. ನಿನಗೆ ಬೇಕಾದರೆ ಬೇಟೆಯಾಡಿ ತಿನ್ನು’ ಎಂದಿತು.
ಸಿಂಹ ನೆನಪು ಮಾಡಿತು, ‘ನಾನು ನಿನಗೆ ಒಂದು ವಾರದ ಹಿಂದೆ ಆಹಾರವನ್ನು ಕೊಟ್ಟದ್ದು ನೆನಪಿಲ್ಲವೆ?’
ಹುಲಿ, ‘ಆದರೂ ಈಗ ನೀನು ಹೋಗು’ ಎಂದಿತು.
‘ಒಂದು ಮಾತು ಹೇಳುತ್ತೇನೆ ಕೇಳು. ಅದೇನೆಂದರೆ-ಉಂಡ ಮನೆಗೆ ಎರಡು ಬಗೆಯಬೇಡ, ನಂಬಿದವರಿಗೆ ದ್ರೋಹ ಮಾಡಿ, ಮಿತ್ರ ದ್ರೋಹಿಯಾಗಬೇಡ’ ಎಂದು ಹುಲಿಗೆ ಸಿಂಹ ಹೇಳಿತು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು. (AI ಚಿತ್ರ ಬಳಸಲಾಗಿದೆ)