ದೊಡ್ಡಬಳ್ಳಾಪುರ: ಮಾದಕ ವಸ್ತುಗಳ ಬಳಕೆ ವಿರುದ್ಧ ಕಠಿಣ ಕಾನೂನು ಕ್ರಮ ಅನಿವಾರ್ಯವಾಗಿದ್ದು, ಈ ಮೂಲಕ ನಶೆ ಮುಕ್ತ ಸಮಾಜ ನಿರ್ಮಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಶಾಲಾ, ಕಾಲೇಜುಗಳ ಆವರಣದಲ್ಲಿ ನಶೆ ಮುಕ್ತ ಭಾರತ ಅಭಿಯಾನದೊಂದಿಗೆ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಬಿ. ನವೀನ್ ಕುಮಾರ್ (Dr. M.B. Naveen Kumar) ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಐದನೇ ವರ್ಷದ ನಶೆ ಮುಕ್ತ ಭಾರತ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕವಸ್ತುಗಳ ಬಳಕೆಯಿಂದ ಹಲವರು ಹಾಳುಗುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವೂ ಮಸಕಾಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ನಿಯಂತ್ರಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.
ಯುವ ಜನತೆಯಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಯೋಗ, ಧ್ಯಾನದ ಮೂಲಕ ದುಶ್ಚಟಗಳಿಂದ ದೂರ ಇರಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆರೋಗ್ಯಯುತ ಜೀವನಕ್ಕೆ ಯೋಗಾಭ್ಯಾಸ ರೂಢಿಸಿಕೊಳ್ಳಿ, ಡ್ರಗ್ಸ್ ಮುಕ್ತ ಕ್ಯಾಂಪಸ್ ನಿರ್ಮಿಸುವುದು ನಿಮ್ಮೆಲ್ಲರ ಪ್ರತಿಜ್ಞೆಯಾಗಲಿ ಎಂದು ಡಾ.ಎಂ.ಬಿ.ನವೀನ್ ಕುಮಾರ್ ಸಲಹೆ ನೀಡಿದರು.
ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಮನೋವೈದ್ಯರಾದ ಡಾಕ್ಟರ್ ಸದಾನಂದ ಮಾತನಾಡಿದ, ದೇಶದಲ್ಲಿ ಸುಮಾರು 27 ಕೋಟಿ ಜನರು ನೇರ ಹಾಗೂ ಪರೋಕ್ಷವಾಗಿ ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆ. ಈ ಪೈಕಿ 4 ಕೋಟಿ ಜನರು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಚಂದ್ರಕಲಾ, ಎಎಸ್ಐ ರಂಗಸ್ವಾಮಿ, ಪ್ರಾಂಶುಪಾಲರದ ಸುನೀತಾ, ಪೊಲೀಸ್ ಸಿಬ್ಬಂದಿಗಳು ಹಾಗೂ ಉಪನ್ಯಾಸ ಹಾಜರಿದ್ದರು.