Harithalekhani: ಒಂದಾನೊಂದು ದಟ್ಟ ಕಾಡಿತ್ತು. ಅಲ್ಲಿ ಸಿಂಹದ ಕುಟುಂಬವೊಂದಿತ್ತು. ಕಾಡಿನ ರಾಜ ಸಿಂಹ, ಪತ್ನಿ ಸಿಂಹಿಣಿಯೊಂದಿಗೆ ಸುಖವಾಗಿತ್ತು. ಇವರಿಗೆ ಇಬ್ಬರು ಮರಿಸಿಂಹಗಳು ಜನಿಸಿದವು. ಮರಿಗಳ ಆಗಮನ ಸಿಂಹ ದಂಪತಿಗಳ ಖುಷಿಯನ್ನು ಹೆಚ್ಚಿಸಿತ್ತು.
ಒಂದು ದಿನ ಸಿಂಹ, ಮನೆಯಲ್ಲಿ ಮರಿಗಳನ್ನು ನೋಡಿಕೊಂಡಿರುವಂತೆ ಸಿಂಹಿಣಿಗೆ ಹೇಳಿ ಬೇಟೆಗಾಗಿ ಕಾಡಿಗೆ ತೆರಳಿತು. ಎಷ್ಟು ಹುಡುಕಿದರೂ ಆ ದಿನ ಸಿಂಹನಿಗೆ ಯಾವ ಬೇಟೆಯೂ ಸಿಗಲಿಲ್ಲ. ಛೇ…ಹೀಗಾಯಿತಲ್ಲಾ ಎಂದು ಬೇಸರಿಸಿಕೊಂಡು ಸಿಂಹ ವಾಪಾಸ್ಸಾಗುತ್ತಿದ್ದಾಗ ದಾರಿಯಲ್ಲಿ ಒಂದು ಪುರಾಣಿ ಪುಟ್ಟ ನರಿ ಮರಿ ಸಿಕ್ಕಿತು. ಸಿಂಹ ಅದಕ್ಕೇನೂ ಮಾಡದೆ, ನರಿಮರಿಯನ್ನು ತಂದು ಪತ್ನಿಗೆ ಉಡುಗೊರೆಯಾಗಿ ನೀಡಿತು.
ಸಿಂಹಿಣಿ ತನ್ನ ಮಕ್ಕಳಂತೆ ಆ ಮರಿಯನ್ನೂ ಪ್ರೀತಿಯಿಂದ ಸಾಕಿದಳು. ಸಿಂಹದ ಮರಿಗಳು ಹಾಗೂ ಪುಟ್ಟ ನರಿ ಸ್ನೇಹಿತರಾದವು. ಸದಾ ಜೊತೆಗಿರುತ್ತಿದ್ದವು. ಒಟ್ಟಿಗೆ ಆಟವಾಡುತ್ತ ಸಂತೋಷದಿಂದ ಕಾಲಕಳೆಯುತ್ತಿದ್ದವು.
ಒಂದು ದಿನ ಆ ಮರಿಗಳೆಲ್ಲಾ ಆಟವಾಡುತ್ತಿರುವಾಗ ಆನೆಯೊಂದು ಎದುರಾಯಿತು. ಸಿಂಹದ ಮರಿಗಳು ಆನೆಯೊಂದಿಗೆ ಬಲಪ್ರದರ್ಶಿಸಲು ಬಯಸಿದವು. ಆದರೆ ಪುಟ್ಟ ನರಿ ಮಾತ್ರ ಭಯಗೊಂಡು, ‘ಅಲ್ಲಿಂದ ಓಡಿ’ ಎಂದಿತು. ಸರಿ ಮರಿಗಳೆಲ್ಲಾ ಮನೆಯತ್ತ ಓಡಿದವು.
ನಡೆದ ಘಟನೆಯನ್ನೆಲ್ಲಾ ಸಿಂಹದ ಮರಿಗಳು ಅಮ್ಮನಿಗೆ ಹೇಳಿದವು. ಆ ಒಂದು ಕ್ಷಣ ಸಿಂಹಿಣಿಗೆ, ಪುಟ್ಟ ನರಿಯ ಮೇಲೆ ತುಂಬಾ ಕೋಪ ಬಂದಿತು. ತನ್ನ ಮರಿಗಳಿಗೆ ‘ಏನಾಗಿದೆ ನಿಮಗೆ, ಹೇಡಿಯಂತೆ ಓಡಿಬಂದಿರುವಿರಾ? ನೀವು ಸಿಂಹದ ಮರಿಗಳು, ಬೇಟೆ, ಆಕ್ರಮಣಗಳೇ ನಿಮ್ಮ ಸ್ವಭಾವ’ ಎಂದಿತು.
ಸಿಂಹಿಣಿ ಪುಟ್ಟ ನರಿಯನ್ನು ನಿಂದಿಸಿತು. ‘ನಿನ್ನ ಸ್ವಭಾವವೇ ಪುಕ್ಕಲುತನ. ಸಿಂಹಗಳ ಜೊತೆ ಬೆಳೆದರೂ ನಿನ್ನ ಮೂಲಗುಣ ಹೋಗಲಿಲ್ಲ. ನೀನಿಲ್ಲೇ ಇದ್ದರೆ ನನ್ನ ಮಕ್ಕಳೂ ನಿನ್ನಂತೆ ಹೆದರಿ ಪುಕ್ಕಲು ಸ್ವಭಾವದವರಾಗುತ್ತಾರೆ. ನೀನಿಲ್ಲಿ ಇರುವುದು ಬೇಡ ಈಗಲೇ ಹೊರಡು’ ಎಂದು ಸಿಂಹಿಣಿ ಘರ್ಜಿಸಿತು.
ಪುಟ್ಟ ನರಿ ಮೌನವಾಗಿ ಇತರ ನರಿಗಳತ್ತ ನಡೆಯಿತು.
ನೀತಿ: ವೀರರ ಸಂಪರ್ಕವಿದ್ದರೂ ಹುಟ್ಟು ಹೇಡಿಯ ಸ್ವಭಾವ ಬದಲಾಗುವುದು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.