Harithalekhani; ಎರಡು ಇಲಿಗಳಿದ್ದವು. ಆವು ತುಂಬಾ ವರ್ಷಗಳಿಂದ ಸ್ನೇಹಿತರಾಗಿದ್ದವು. ಒಂದು ಇಲಿ ನಗರದಲ್ಲಿ ವಾಸಿಸುತ್ತಿತ್ತು. ಮತ್ತೊಂದು ಇಲಿ ಪಕ್ಕದ ಹಳ್ಳಿಯಲ್ಲಿ ವಾಸವಾಗಿದ್ದು ಸಂತೋಷದಿಂದ ನೆಮ್ಮದಿಯಾಗಿತ್ತು.
ಹೀಗಿರಲು ಒಂದು ನಗರದಲ್ಲಿ ವಾಸಿಸುತ್ತಿದ್ದ ಇಲಿ, ಸ್ನೇಹಿತನನ್ನು ಕಾಣಲು ಹಳ್ಳಿಗೆ ಬಂದಿತು. ತನ್ನನ್ನು ಹುಡುಕಿಕೊಂಡು ಮನೆಗೆ ಬಂದ ಸ್ನೇಹಿತನನ್ನು ಕಂಡು ಹಿರಿಹಿರಿ ಹಿಗ್ಗಿತು ಹಳ್ಳಿಯ ಇಲಿ. ಇಬ್ಬರ ನಡುವೆ ಉಭಯ ಕುಶಲೋಪರಿ ನಡೆಯಿತು. ‘ನೀನು ಹೇಗಿದ್ದೀಯಾ’ ಎಂದು ಒಂದನ್ನೊಂದು ವಿಚಾರಿಸಿಕೊಳ್ಳುವ ಮೂಲಕ ತಮ್ಮ ಹಳೆಯ ಗೆಳೆತನದ ದಿನಗಳನ್ನು ಮೆಲುಕು ಹಾಕಿದವು.
ನಗರದಲ್ಲಿ ವೈಭವಯುತವಾದ ಜೀವನದ ರುಚಿ ಕಂಡ ಇಲಿ, ಹಳ್ಳಿಯಲ್ಲಿ ವಾಸವಾಗಿದ್ದ ಸ್ನೇಹಿತ ಇಲಿಯನ್ನು ಛೇಡಿಸಿತು.
‘ಅಯ್ಯೋ… ಈ ವಾತಾವರಣದಲ್ಲಿ ನೀನು ಹೇಗೆ ವಾಸವಾಗಿರುವೆ? ನನಗಂತೂ ಇಲ್ಲಿರಲು ಆಗುತ್ತಿಲ್ಲ, ನೀನಾದರೂ ಹೇಗಿದ್ದಿಯೋ ಏನೋ? ಒಮ್ಮೆ ನಗರಕ್ಕೆ ಬಂದು ನೋಡು ಜೀವನ ಹೇಗಿರುತ್ತದೆ ಎಂದು… ಅಬ್ಬಾ ನನಗಂತೂ ನಗರವೇ ಇಷ್ಟ’ ಎಂದು ಹೇಳಿ ಗೆಳೆಯನಿಗೆ ಆಹ್ವಾನ ನೀಡಿತು ನಗರದ ಇಲಿ.
ಸ್ನೇಹಿತರ ಕರೆಗೆ ಇಲ್ಲ ಎನ್ನಲಾದೀತೆ? ಗೆಳೆಯನ ಆಹ್ವಾನ ಮನ್ನಿಸಿ ಹಳ್ಳಿಯ ಇಲಿ ಆತನೊಂದಿಗೆ ಹೊರಡಲು ಸಿದ್ದವಾಯಿತು. ಇಬ್ಬರೂ ಸ್ನೇಹಿತರು ಕಲೆತು ನಗರಕ್ಕೆ ಆಗಮಿಸಿದರು.
ಜನಗರ ಜೀವನ ಶೈಲಿ ಕಂಡು ಹಳ್ಳಿಯ ಇಲಿಗೆ ನಿಜಕ್ಕೂ ಖುಷಿಯಾಯಿತು. ಇಲ್ಲಿನ ಜಗಮಗಿಸುವ ವ್ಯವಸ್ಥೆ ಅದಕ್ಕೆ ಸಂತೋಷ ಸಂಭ್ರಮ ನೀಡಿತು. ಅದು ಇಲಿಯನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು.
ಅಪರೂಪಕ್ಕೆ ಸೇರಿದ್ದ ಗೆಳೆಯರಿಬ್ಬರು ಊಟ ಮಾಡಲೆಂದು ಸುಸಜ್ಜಿತವಾದ ಹೋಟೆಲ್‌ಗೆ ಹೋದರು. ಅಬ್ಬಾ… ಈ ದಿನ ಮಜವಾಗಿ ಊಟ ಮಾಡಬಹುದೆಂದು ಲೆಕ್ಕಾಚಾರ ಮಾಡುತ್ತಲೇ ಆಹಾರದ ರಾಶಿಯನ್ನು ಕಣ್ಣಲ್ಲೇ ಸವಿಯುತ್ತಾ ನೋಡುತ್ತಿದ್ದವು.
ಇನ್ನೇನು ಆಹಾರವನ್ನು ಸವಿಯಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ‘ಮಿಯಾಂವ್…ಮಿಯಾಂವ್…’ ಎಂಬ ಧ್ವನಿ ಕಿವಿಗಪ್ಪಳಿಸಿತು. ಗೆಳೆಯರಿಬ್ಬರೂ ಎಚ್ಚೆತ್ತುಕೊಂಡರು. ಧ್ವನಿ ಬಂದ ಕಡೆ ನೋಡುತ್ತಾರೆ. ಪಕ್ಕದ ಕಿಟಕಿಯಿಂದ ಬೆಕ್ಕೊಂದು ಕಳ್ಳ ಹೆಜ್ಜೆ ಇರಿಸಿಕೊಂಡು ಇವರೆಡೆಗೆ ಬರುತ್ತಿದೆ. ತಮ್ಮತ್ತಲೇ ಬರುತ್ತಿರುವ ಬೆಕ್ಕನ್ನು ನೋಡಿದ್ದೇ ತಡ, ಆ ಎರಡು ಇಲಿಗಳು ದಿಕ್ಕಾಪಾಲಾಗಿ ಓಡುತ್ತಾ ತಮ್ಮ ಬಿಲವನ್ನು ಹೊಕ್ಕಿದವು. ತಿನ್ನಬೇಕು ಎಂದು ಇಲಿಗಳು ಇಟ್ಟುಕೊಂಡಿದ್ದ ಮೃಷ್ಟಾನ್ನ ಭೋಜನ ಅಂದು ಬೆಕ್ಕಿನ ಪಾಲಾಯಿತು.
ಬೆಕ್ಕು ಹೋಗುವುದನ್ನು ಬಿಲದಿಂದಲೇ ಇಣುಕಿ ನೋಡುತ್ತಿದ್ದ ಇಲಿಗಳು ಬೆಕ್ಕು ಹೋದ ನಂತರ ಹೊರಬಂದವು.
‘ಸರಿ ನಾನಿನ್ನು ಬರುತ್ತೇನೆ’ ಎಂದು ದುಃಖದಿಂದಲೇ ಹೇಳಿತು ಹಳ್ಳಿಯ ಇಲಿ.
‘ಇರು, ಹೋಗುವೆಯಂತೆ’ ಎಂದಿತು ನಗರದ ಇಲಿ. ಅದಕ್ಕೆ ಹಳ್ಳಿಯ ಇಲಿ, ‘ಬೇಡಪ್ಪಾ, ನಗರದ ಸಹವಾಸವೇ ಬೇಡ. ಸದಾ ಆಪತ್ತಿನಲ್ಲೇ ಇರುವ, ರಕ್ಷಣೆ ಇಲ್ಲದಿರುವ ನಿನ್ನ ತಾಣಕ್ಕಿಂದ ಸರಳವಾಗಿರುವ, ಸುರಕ್ಷಿತವಾಗಿರುವ ನನ್ನ ಹೊಲದ ಮನೆಯೇ ಚೆಂದ’ ಎನ್ನುತ್ತಾ ಇಲಿ ತನ್ನ ಹಳ್ಳಿಗೆ ವಾಪಾಸಾಯಿತು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.