ದೊಡ್ಡಬಳ್ಳಾಪುರ: ನಾಗರಹಾವು (Cobra) ಕಚ್ಚಿದ ಪರಿಣಾಮ 7 ವರ್ಷದ ಬಾಲಕನೋರ್ವ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಾಗಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಬಳಿ ಸಂಭವಿಸಿದೆ.
ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕ ಕುಟುಂಬದ ಅಮೀದ್ ಕುಮಾರ್‌ಗೆ (7 ವರ್ಷ) ಇಂದು ಮಧ್ಯಾಹ್ನ ನಾಗರಹಾವು ಕಚ್ಚಿದ ಪರಿಣಾಮ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಾಗ ಮಗುವಿನ ಪರಿಸ್ಥಿತಿ ತೀವ್ರ ಗಂಭೀರವಾಗಿತ್ತು ಎನ್ನಲಾಗಿದೆ.
ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ.ರಾಜು, ಡಾ.ವಿಜಯ ಅವರು ತುರ್ತು ಚಿಕಿತ್ಸೆಯ ಸತತ ಪ್ರಯತ್ನದ ಫಲವಾಗಿ ಮಗು ಸ್ವಲ್ಪ ಮಟ್ಟಿಗೆ ಉಸಿರಾಟ ಪ್ರಾರಂಭವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಲಾಗಿದೆ.
ಈ ವೇಳೆ ಆಕಾಶ್ ಆಸ್ಪತ್ರೆ ವೈದ್ಯರಾದ ಡಾ.ಮನೋಜ್, ಡಾ.ನಿತೀಶ್ ಮಗುವಿಗೆ ಚಿಕಿತ್ಸೆ ನೀಡುತ್ತಾ ಜೊತೆಯಲ್ಲೇ ತೆರಳಿ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮಕ್ಕಳ ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದಾರೆ.
ಪ್ರಸ್ತುತ ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುತ್ತದೆ ಎನ್ನಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಎಂಬ ಮಾಹಿತಿ ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)