ದೊಡ್ಡಬಳ್ಳಾಪುರ: ನಾಗರಹಾವು (Cobra) ಕಚ್ಚಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 7 ವರ್ಷದ ಬಾಲಕ ಅಪಾಯದಿಂದ ಪಾರಾಗಿದ್ದಾನೆ.
ನಿನ್ನೆ ಮಧ್ಯಾಹ್ನ ತಾಲೂಕಿನ ಕೋಡಿಹಳ್ಳಿ ಬಳಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕ ಕುಟುಂಬದೊಂದಿಗೆ ಕೆಲಸಕ್ಕೆ ತೆರಳಿದ್ದ ವೇಳೆ ಅಮೀದ್ ಕುಮಾರ್‌ಗೆ (7 ವರ್ಷ) ನಾಗರಹಾವು ಕಚ್ಚಿತ್ತು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಕೂಡಲೇ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಆಸ್ಪತ್ರೆಯ ವೈದ್ಯರಾದ ಡಾ.ರಾಜು, ಡಾ.ವಿಜಯ ಅವರು ತುರ್ತು ಚಿಕಿತ್ಸೆಯ ಸತತ ಪ್ರಯತ್ನದ ಫಲವಾಗಿ ಮಗು ಸ್ವಲ್ಪ ಮಟ್ಟಿಗೆ ಉಸಿರಾಟ ಪ್ರಾರಂಭವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಲಾಗಿತ್ತು.
ಈ ವೇಳೆ ಆಕಾಶ್ ಆಸ್ಪತ್ರೆ ವೈದ್ಯರಾದ ಡಾ.ಮನೋಜ್, ಡಾ.ನಿತೀಶ್ ಮಗುವಿಗೆ ಚಿಕಿತ್ಸೆ ನೀಡುತ್ತಾ ಜೊತೆಯಲ್ಲೇ ತೆರಳಿ, ವಿಕ್ಟೋರಿಯಾ ಆಸ್ಪತ್ರೆಯ ಮಕ್ಕಳ ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದರು.
ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಡಾ.ರಾಜು ನೇತೃತ್ವದ ವೈದ್ಯರ ಸಮಯ ಪ್ರಜ್ಞೆ, ಪೋಷಕರು ಹಾಗೂ ಜನರ ಹಾರೈಕೆಯಿಂದ ಬಾಲಕ ಅಮೀದ್ ಕುಮಾರ್ ಜೀವಾಪಾಯದಿಂದ ಪಾರಾಗಿದ್ದಾನೆ.
ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.