Harithalekhani: ಒಂದು ಸುಂದರವಾದ ಮರ. ಆ ಮರಕ್ಕೆ ಅನೇಕ ಪಕ್ಷಿ, ಪ್ರಾಣಿಗಳು ಬಂದುಹೋಗುತ್ತಿದ್ದವು. ಕೆಲವು ಆ ಮರದಲ್ಲಿಯೇ ವಾಸವಾಗಿದ್ದವು. ಒಂದು ಇಲಿಯು ತನ್ನ ವಾಸಸ್ಥಾನಕ್ಕಾಗಿ ಆ ಮರದ ಕೆಳಗೆ ಒಂದು ಬಿಲವನ್ನು ಮಾಡಿಕೊಂಡಿತ್ತು. ಅದು ದುರಾಸೆಯ ಇಲಿ.
ಮರದ ಮೇಲೆ ಹಕ್ಕಿಗಳು ವಾಸವಾಗಿದ್ದವು. ಇಲಿ ಹಕ್ಕಿಗಳು ಇಲ್ಲದೇ ಇರುವಾಗ ತಿನ್ನಲು ಶುರುಮಾಡಿತು. ಹೀಗೆ ಮಾಡುತ್ತಿರುವಾಗ ಒಂದು ದಿನ ಆ ಇಲಿಯು ತನ್ನ ಬಿಲದಿಂದ ಹೊರಗೆ ಬಂದು ಮರವನ್ನು ಹತ್ತಿ ಅಲ್ಲಿರುವ ಹಕ್ಕಿಗಳ ಮೊಟ್ಟೆಗಳನ್ನು ಒಂದು ಬೆಕ್ಕಿನ ಕಣ್ಣಿಗೆ ಬಿತ್ತು. ಆದರೆ ಬೆಕ್ಕು ಯಾವಾಗ ಇಲಿಯನ್ನು ಹಿಡಿಯಲು ಹೋದರೂ ಇಲಿ ಹೇಗಾದರೂ ತಪ್ಪಿಸಿಕೊಂಡು ಬಿಲ ಸೇರುತ್ತಿತ್ತು.
ಹೀಗಿರುವಾಗ ಒಂದು ದಿನ ಅಲ್ಲಿ ಒಬ್ಬ ಬೇಟೆಗಾರನು ತನ್ನ ಆಹಾರಕ್ಕಾಗಿ ಬಲೆಯನ್ನು ಎಸೆದು ಹೋದನು. ಅವನು ಒಂದು ದಿನ ಬಿಟ್ಟು ಬಂದು ಬಲೆಯನ್ನು ನೋಡಿದಾಗ ಅದರಲ್ಲಿ ಒಂದು ಸುಂದರವಾದ ಜಿಂಕೆ ಬಂದು ಬಿದ್ದಿತ್ತು. ಸಂತೋಷಗೊಂಡ ಬೇಟೆಗಾರನು ಆ ಮರದ ಕೆಳಗೆ ಮತ್ತೆ ಬಲೆಯನ್ನು ಎಸೆದು ಹೋದನು.
ಆದರೆ ಈ ಸಲದ ಸರದಿ ಬಂದಿದ್ದು ಬೆಕ್ಕಿಗೆ. ಆ ಬೆಕ್ಕು ಮರದ ತಳದಲ್ಲಿರುವ ಇಲಿಯನ್ನು ಹಿಡಿಯಲು ಹೋಗಿದ್ದಾಗ ಇಲಿ ತಪ್ಪಿಸಿಕೊಂಡು ಹೋಯಿತು. ಆದರೆ ಬೆಕ್ಕು ಬಲೆಯೊಳಗೆ ಬಿದ್ದಿತು. ಮರುದಿನ ಬೇಟೆಗಾರನ ಆಹಾರಕ್ಕೆ ಈ ಬೆಕ್ಕು ಬಲಿಯಾಗಬೇಕಿತ್ತು.
ಬೆಕ್ಕಿಗೆ ಪ್ರಾಣಸಂಕಟವಾಯಿತು. ಅದು ಬಲೆಯಲ್ಲಿ ಬಿದ್ದಾಗ ಇತರ ನರಿ ಹಾಗೂ ಗೂಬೆ ಇಲಿಯನ್ನು ಹಿಡಿಯಲು ಬಂದವು. ಇಲಿಗೂ ಪ್ರಾಣ ಸಂಕಟವಾಯಿತು.
ಇಲಿಯು ಬೆಕ್ಕಿನೊಡನೆ ಒಪ್ಪಂದ ಮಾಡಿಕೊಂಡಿತು. ‘ನಾನು ನಿನ್ನನ್ನು ಈ ಬಲೆಯಿಂದ ಮುಕ್ತ ಮಾಡುತ್ತೇನೆ. ಆದರೆ ನೀನು ಬಲೆಯಿಂದ ಮುಕ್ತವಾದ ಮೇಲೆ ನನ್ನನ್ನು ಕೊಲ್ಲಬಾರದು. ನರಿ ಮತ್ತು ಗೂಬೆಯನ್ನು ಮುತ್ತಿಗೆ ಹಾಕಬೇಕು’ ಎಂದು ಇಲಿಯು ಬೆಕ್ಕಿನ ಹತ್ತಿರ ಕೇಳಿಕೊಂಡಿತು. ಬೆಕ್ಕು ಇಲಿಯ ಮಾತನ್ನು ಒಪ್ಪಿತು. ಇಲಿಯು ಬೇಟೆಗಾರನು ಹಾಕಿದ ಬಲೆಯಿಂದ ಬೆಕ್ಕನ್ನು ಮುಕ್ತಗೊಳಿಸಿತು. ಬೆಕ್ಕು ಇಲಿಯನ್ನು ನರಿ ಹಾಗೂ ಗೂಬೆಯಿಂದ ಕಾಪಾಡಿತು. ಸಂಕಟ ಎದುರಿಸುವಾಗ ಶತ್ರುಗಳೂ ಮಿತ್ರರಾಗುವುದುಂಟು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು. (ಸರ್ಕಾರಿ ಲೈಬ್ರರಿಯಿಂದ)