Quoting a line from the RSS anthem: DCM D.K. Shivakumar apologizes to activists

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: “ನಾನು ಯಾವುದೇ ತಪ್ಪು ಮಾಡಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶ ನನ್ನದಲ್ಲ. ಆದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಇಂಡಿಯಾ ಮೈತ್ರಿ ಕೂಟದ ನಾಯಕರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ತಿರುಗೇಟು ನೀಡಿದರು.

ನಾನು ಆರ್ ಎಸ್ ಎಸ್ ಹೊಗಳಿಲ್ಲ, ಎದುರಾಳಿಗಳ ಬಗ್ಗೆ ತಿಳಿಯುವುದು ನನ್ನ ಕರ್ತವ್ಯ

“ನಾನು ಕೆಲವು ದಿನಗಳ ಹಿಂದೆ ಸದನದಲ್ಲಿ ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಚರ್ಚೆ ವೇಳೆ ನಮ್ಮ ನಾಯಕರಾದ ಪರಮೇಶ್ವರ್ ಅವರನ್ನು ಸಮರ್ಥಿಸಿಕೊಳ್ಳುತ್ತಾ, ನಾನು ಅವರ ಗರಡಿಯಲ್ಲಿ ಬೆಳೆದಿದ್ದೇನೆ ಎಂದು ಹೇಳಿದೆ. ಕೆಣಕಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಾಲೆಳೆಯಲು ಅವರು ಬೆಳೆದು ಬಂದಿರುವ ಹಿನ್ನೆಲೆಯೂ ನನಗೆ ಗೊತ್ತಿದೆ ಎಂದು ಆರ್ ಎಸ್ಎಸ್ ಗೀತೆಯ ಎರಡು ಸಾಲು ಹೇಳಿದೆ. ಆರ್ ಎಸ್ಎಸ್ ಹೊಗಳುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ನಿರ್ದಿಷ್ಟ ಭಾಗವನ್ನು ಮಾತ್ರ ಕಟ್ ಅಂಡ್ ಪೇಸ್ಟ್ ಮಾಡಿ, ಬೇರೆ ವಿಚಾರಗಳ ಜೊತೆ ಬೆರೆಸಿ ರಾಷ್ಟ್ರ ಮಟ್ಟದ ಸುದ್ದಿ ಮಾಡಲಾಗಿದೆ” ಎಂದು ಹೇಳಿದರು.

“1979 ರಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿಕೊಂಡು ಬಂದವನು. ನಾನು ಹೊಸದಾಗಿ ಪಕ್ಷ ಸೇರಿದವನಲ್ಲ. ಯಾರಿಂದಲೂ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆಯೂ ಇಲ್ಲ. ಇಂದಿರಾ ಗಾಂಧಿ ಅವರು ನಿಧನ ಹೊಂದಿದ ಸಂದರ್ಭದಲ್ಲಿ ನನ್ನ ಟೂರಿಂಗ್ ಟಾಕೀಸ್ ಗೆ ಇಂದಿರಾ ಚಿತ್ರಮಂದಿರ ಎಂದು ಹೆಸರಿಟ್ಟವನು ನಾನು. ನನ್ನ ಹಾಗೂ ಗಾಂಧಿ ಕುಟುಂಬದ ನಡುವಿನ ಸಂಬಂಧ ಭಕ್ತ ಹಾಗೂ ಭಗವಂತನ ನಡುವಣ ಸಂಬಂಧ” ಎಂದರು.

“ರಾಜಕೀಯ ನಾಯಕನಾಗಿ ಹಾಗೂ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ, ಎನ್ಎಸ್ ಯುಐನಲ್ಲಿ ವಿದ್ಯಾರ್ಥಿ ನಾಯಕನಾಗಿ ಬೆಳೆದವನು ನಾನು. ಗಾಂಧಿ ಕುಟುಂಬ ಹಾಗೂ ಅದರ ಕೊಡುಗೆ ಸೇರಿದಂತೆ, ಕಾಂಗ್ರೆಸ್ ಪಕ್ಷದ ಇತಿಹಾಸ, ಆರ್ ಎಸ್ಎಸ್ ಇತಿಹಾಸ, ಬಿಜೆಪಿ ಇತಿಹಾಸ, ಜೆಡಿಎಸ್, ಕಮ್ಯುನಿಷ್ಟ್ ಪಕ್ಷಗಳ ಇತಿಹಾಸ, ಅಜೆಂಡಾ ತಿಳಿದಿದ್ದೇನೆ. ಇದು ನನ್ನ ಕರ್ತವ್ಯ. ಕೇರಳದಲ್ಲಿ ನಮ್ಮ ಮೈತ್ರಿ ಪಕ್ಷ ಮುಸ್ಲಿಂ ಲೀಗ್ ಯೂಥ್ ಕಾನ್ಫರೆನ್ಸ್ ಗೆ ಕೆಲ ವರ್ಷಗಳ ಹಿಂದೆ ಹೋಗಿದ್ದೆ. ಆಗ ಅವರ ಶಿಸ್ತು, ಸಂಘಟನೆ ನೋಡಿ ನಾನು ಬೆರಗಾಗಿದ್ದೆ” ಎಂದು ಹೇಳಿದರು.

“ನಮ್ಮ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಹಾಗೂ ಅಧಿಕಾರಕ್ಕೆ ಬಂದ ನಂತರ ಆರ್ ಎಸ್ಎಸ್ ಹೇಗೆ ಬೇರೂರಿದೆ ಎಂದು ಅರಿತಿದ್ದೇನೆ. ರಿಸರ್ವ ಬ್ಯಾಂಕ್ ಕಚೇರಿ ಎದುರು ಆರ್ ಎಸ್ಎಸ್ ನ ದೊಡ್ಡ ಕಟ್ಟಡವಿದೆ. ವರ್ಷಕ್ಕೆ ಕೋಟ್ಯಂತರ ರೂ. ಬಾಡಿಗೆ ಪಡೆಯುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಎಷ್ಟು ಶಾಲೆ ಆರಂಭಿಸಿದ್ದಾರೆ. ಚನ್ನೇನಹಳ್ಳಿಯಲ್ಲಿ ಯಾವ ರೀತಿ ಭವ್ಯ ಕಟ್ಟಡ ನಿರ್ಮಿಸುತ್ತಿದ್ದಾರೆ, ರಾಜ್ಯದಲ್ಲಿ ಹೇಗೆ ಸಂಘಟನೆ ಮಾಡುತ್ತಿದ್ದಾರೆ ಎಂಬುದನ್ನು ರಾಜಕೀಯ ನಾಯಕನಾಗಿ ಅರಿತಿದ್ದೇನೆ. ಪಕ್ಷದ ಅಧ್ಯಕ್ಷನಾಗಿ ನಮ್ಮ ವಿರೋಧಿಗಳ ಸಂಘಟನೆ ಬಗ್ಗೆ ತಿಳಿಯುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು.

“ವಿದ್ಯಾರ್ಥಿ ನಾಯಕನಾಗಿದ್ದಾಗ ನನ್ನ ವಿರುದ್ಧ ಕಮ್ಯೂನಿಷ್ಟರು, ಬಲಪಂಥೀಯ ಸಿದ್ಧಾಂತದ ಎಬಿವಿಪಿಯವರು ನಿಲ್ಲುತ್ತಿದ್ದರು. ಆಗ ಪ್ರಾಧ್ಯಾಪಕರನ್ನೇ ಉಪಾಧ್ಯಕ್ಷರನ್ನಾಗಿ ಮಾಡಿಕೊಂಡು ತರಬೇತಿ ಕೊಡಿಸುತ್ತಿದ್ದರು. ನಾನು, ನಮ್ಮ ಹುಡುಗರು ಸೂಕ್ತ ತರಬೇತಿ ಪಡೆದು ಆ ಗರಡಿಯಲ್ಲಿ ತಯಾರಾದವನು ನಾನು. ಪಕ್ಷದ ಆಂತರಿಕ ರಾಜಕೀಯದ ಕಾರಣಕ್ಕೆ ನನಗೆ ಟಿಕೆಟ್ ಸಿಗದಿದ್ದಾಗಲೂ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಫೋಟೋ ಹಾಕಿಕೊಂಡೇ ಚುನಾವಣೆ ಗೆದ್ದೆ. ಆಗ ನನ್ನ ಮನೆ ಬಾಗಿಲಿಗೆ ಎಷ್ಟೋ ಜನ ಬಂದರೂ ನಾನು ಹುಟ್ಟು ಕಾಂಗ್ರೆಸಿಗ, ಕಾಂಗ್ರೆಸಿಗನಾಗಿಯೇ ಸಾಯುತ್ತೇನೆ ಎಂದು ನಾಲ್ಕೇ ತಿಂಗಳಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಭಾಗವಾದೆ. ಈ ರೀತಿ ರಾಜಕಾರಣ ಮಾಡಿಕೊಂಡು ಬಂದಿರುವನು ನಾನು” ಎಂದು ವಿವರಿಸಿದರು.

ಬೆದರಿಕೆಗೆ ಹೆದರುವ ರಕ್ತ ನನ್ನದಲ್ಲ

“ನನ್ನ ಇತಿಹಾಸ, ನನ್ನ ಬದ್ಧತೆ, ನನ್ನ ಸಿದ್ಧಾಂತದ ಬಗ್ಗೆ ಗೊತ್ತಿಲ್ಲದೆ ರಾಜಕೀಯ ಮಾಡಿದರೆ, ಅದು ಅವರ ಇಚ್ಛೆ. ನನ್ನ ಪಕ್ಷದ ಕೆಲವು ಸಹೋದ್ಯೋಗಿಗಳು ಕೂಡ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಇಂಡಿಯಾ ಮೈತ್ರಿಕೂಟದ ನಾಯಕರಿಗೆ ಕ್ಷಮೆ ಕೋರುತ್ತೇನೆಯೇ ವಿನಃ ರಾಜಕೀಯ ಮಾಡುವವರಿಗೆ ಹೆದರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ನನ್ನನ್ನು ಬೆದರಿಸಿ ಕ್ಷಮೆ ಕೇಳಿಸಲಾಗಿದೆ ಎಂಬ ಭಾವನೆ ಬೇಡ. ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಡೆದ ಸಾತನೂರು ಘಟನೆ, ಬೇರೆ ಬೇರೆ ಘಟನೆಗಳು, ಸದನದಲ್ಲಿ ನಡೆದ ಘಟನೆಗಳು, ಆಪರೇಷನ್ ಕಮಲ ಆದಾಗ ಏನಾಯ್ತು? ಯಾರು, ಯಾರು ಯಾವ ಮೂಲದಿಂದ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಬೇರೆ ಪಕ್ಷಕ್ಕೆ ಹೇಗಿದ್ದಾರೆ ಎಂಬುದು ಗೊತ್ತಿರಬೇಕು” ಎಂದು ತಿರುಗೇಟು ನೀಡಿದರು.

ನನ್ನ ಪಕ್ಷ ನಿಷ್ಠೆ ಪ್ರಶ್ನೆ ಮಾಡುವವರು ಮೂರ್ಖರು

“ನಾನು ವಿರೋಧ ಪಕ್ಷಗಳ ಕಾಲೆಳೆಯಲು ಈ ಸಾಲುಗಳನ್ನು ಪ್ರಸ್ತಾಪಿಸಿದ್ದೇನೆ. ನನ್ನ ಕೆಲವು ಸ್ನೇಹಿತರು ಇದರಲ್ಲಿ ರಾಜಕೀಯ ಮಾಡಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ಹೊರಟಿದ್ದಾರೆ. ನಾನು ಹುಟ್ಟು ಕಾಂಗ್ರೆಸಿಗ ಎಂಬ ಹೇಳಿಕೆಗೆ ನಾನು ಬದ್ಧ. ಪಕ್ಷ ಹಾಗೂ ಗಾಂಧಿ ಕುಟುಂಬಕ್ಕೆ ಇರುವ ನನ್ನ ನಿಷ್ಠೆಯನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡುವವರು ಮೂರ್ಖರು. ರಾಜ್ಯ ರಾಜಕೀಯ ಇತಿಹಾಸದಲ್ಲಿ ನಾನು ಮಾಡಿರುವ ಹೋರಾಟವನ್ನು ಬೇರೆ ಯಾರೂ ಮಾಡಿಲ್ಲ. ಹೋರಾಟದಲ್ಲಿ ಅವರು ನನ್ನ ಸಮೀಪಕ್ಕೂ ಬರಲು ಸಾಧ್ಯವಿಲ್ಲ. ನಾನು ಈ ಮಾತನ್ನು ನನ್ನ ಸಮಕಾಲೀನರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇನೆ. ಹಿರಿಯ ನಾಯಕರ ಜೊತೆ ಹೋಲಿಕೆ ಮಾಡಿಕೊಳ್ಳುತ್ತಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.

“ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಧ್ಯಕ್ಷರು. ನಾನು ಅವರೊಂದಿಗೆ ಕಳೆದ 35 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಗಾಂಧಿಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೂರು ಕಾಂಗ್ರೆಸ್ ದೇವಾಲಯ ಸ್ಥಾಪಿಸಬೇಕು ಎಂಬ ಗುರಿ ಹೊಂದಿದ್ದೇನೆ. ಪ್ರತಿ ಕ್ಷೇತ್ರದಲ್ಲಿನ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯ ಮಹತ್ವ ಅರಿಯಬೇಕು ಎಂದು ಈ ತೀರ್ಮಾನ ಮಾಡಿದ್ದೇನೆ. ನಾನು ಎಷ್ಟು ವರ್ಷ ಅಧಿಕಾರದಲ್ಲಿ ಇರುತ್ತೇನೋ ಗೊತ್ತಿಲ್ಲ. ಆದರೆ ಪಕ್ಷದ ಇತಿಹಾಸ ಪುಟಗಳಲ್ಲಿ ನಾನು ಶಾಶ್ವತವಾಗಿ ಉಳಿಯಲು ಬಯಸುತ್ತೇನೆ. ನನ್ನನ್ನು ಟೀಕಿಸಿ, ಮಾರ್ಗದರ್ಶನ ನೀಡುತ್ತಿರುವ ನನ್ನ ಎಲ್ಲಾ ಸ್ನೇಹಿತರು ಹಾಗೂ ಮಾಧ್ಯಮದವರಿಗೆ ಧನ್ಯವಾದಗಳು” ಎಂದು ವಿವರಿಸಿದರು.

ಪಕ್ಷದ ಪರವಾಗಿ ಕೆಲಸ ಮಾಡಿ, ನಂತರ ಅನುಭವಿಸಿದ ಕಷ್ಟ ನನಗೆ ಮಾತ್ರ ಗೊತ್ತು

“ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದ ರಕ್ಷಣೆ ವೇಳೆ ನಾನು ಏನು ಮಾಡಿದೆ, ಅದರಿಂದ ನನ್ನ ವಿರುದ್ಧ ಎಷ್ಟು ಕೇಸ್ ದಾಖಲಾಯಿತು ಎಂದು ಎಲ್ಲರಿಗೂ ತಿಳಿದಿದೆ. ನಂತರ ಗುಜರಾತಿನ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಪಕ್ಷದ ಅಭ್ಯರ್ಥಿ ಅಹ್ಮದ್ ಪಟೇಲರು ಗೆಲ್ಲಲು ಅನುವಾಗುವಂತೆ ಶಾಸಕರನ್ನು ರಕ್ಷಣೆ ಮಾಡಿದೆ. ಇದಕ್ಕಾಗಿ ನನ್ನ ಮೇಲೆ, ನನ್ನ ಕುಟುಂಬ ಹಾಗೂ ಸ್ನೇಹಿತರು ಸೇರಿ 77 ಜನರ ಮೇಲೆ ಐಟಿ, ಸಿಬಿಐ ಹಾಗೂ ಇಡಿ ದಾಳಿ ನಡೆದವು. ಒಟ್ಟು 400 ಪ್ರಕರಣಗಳು ದಾಖಲಾದವು. ಇದರ ಬಗ್ಗೆ ಎಲ್ಲರಿಗೂ ಗೊತ್ತಿದೆ” ಎಂದು ತಿಳಿಸಿದರು.

“ಈ ಪ್ರಕ್ರಿಯೆಯಲ್ಲಿ ನಾನು ಎಷ್ಟು ಕಿರುಕುಳ ಅನುಭವಿಸಿದ್ದೇನೆ, ತಿಹಾರ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದೇನೆ. ಇ.ಡಿ ಪ್ರಕರಣ ದಾಖಲಾದವು. ಈ ಎಲ್ಲಾ ಪ್ರಕರಣಗಳು ಸುಪ್ರೀಂ ಕೋರ್ಟ್ ನಲ್ಲಿ ವಜಾಗೊಂಡವು. ತಿಹಾರ್ ಜೈಲಿನಲ್ಲಿ ನನಗೆ ಕೂರಲು ಚೇರ್ ಇರಲಿಲ್ಲ. ಇದರ ಪರಿಣಾಮ ನನ್ನ ಮಂಡಿಗೆ ಆಗಿರುವ ಹಾನಿ ನನಗೆ ಮಾತ್ರ ಗೊತ್ತಿದೆ. 10X10 ಅಡಿ ಜಾಗದ ಸೆಲ್ ನಲ್ಲಿ ಅಲ್ಲೇ ಶೌಚಾಲಯ ಮಾಡಿ, ನೆಲದ ಮೇಲೆ ಮಲಗಿ, ಅವರು ಕೊಟ್ಟ ಆಹಾರ ತಿಂದು ನಾನು ಹೇಗೆ ಅಷ್ಟು ದಿನ ಕಳೆದಿದ್ದೇನೆ ಎಂದು ನನಗೆ ಮಾತ್ರ ಗೊತ್ತಿದೆ. ಇ.ಡಿ ದಾಖಲಿಸಿದ ಪ್ರಕರಣ ಏನಾಯ್ತು ಎಂದು ಯಾರೂ ಚರ್ಚೆ ಮಾಡುವುದಿಲ್ಲ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ವಜಾ ಮಾಡಿದೆ. ಇದರ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಈ ಎಲ್ಲಾ ವಿಚಾರವನ್ನು ಸರಿಯಾಗಿ ದಾಖಲೆ ಹೋಗುವ ಸಂದರ್ಭ ಬಂದಾಗ ವಿವರವಾಗಿ ಹೇಳುತ್ತೇನೆ” ಎಂದರು.

“ನನ್ನ ಬಂಧನವಾದಾಗ, ಅನೇಕರು ಸಂತೋಷ ಪಟ್ಟರು. ಡಿ.ಕೆ. ಶಿವಕುಮಾರ್ ರಾಜಕಾರಣ ಮುಗಿದು ಹೋಯಿತು ಎಂದು ಭಾವಿಸಿದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆ ಮಾಡಿ ನನಗೆ ಕೆಪಿಸಿಸಿ ಅಧ್ಯಕ್ಷಗಿರಿಯ ಜವಾಬ್ದಾರಿ ನೀಡಿದರು. ಅಂದಿನಿಂದ ಇಂದಿನವರೆಗೂ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ಸೋಮವಾರ ರಾತ್ರಿ ಕೂಡ ನಗರ ಪ್ರದಕ್ಷಿಣೆ ಮುಗಿಸಿ ಮಲಗಿದಾಗ 3 ಗಂಟೆ” ಎಂದು ತಿಳಿಸಿದರು.

ನಾನು ಹಿಂದೂ, ಆದರೂ ಎಲ್ಲಾ ಧರ್ಮಗಳ ಮೇಲೆ ನಂಬಿಕೆ ಇದೆ

“ನನಗೆ ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಮಾತನಾಡುವ ಶಕ್ತಿ ಇದೆ. ವಂದೇ ಮಾತರಂ ಬಗ್ಗೆಯೂ ಮಾತನಾಡಬಲ್ಲೇ, ಯಧಾ ಯಧಾಯ ಧರ್ಮಸ್ಯ ಶ್ಲೋಕದ ಬಗ್ಗೆಯೂ ಮಾತನಾಡಬಲ್ಲೆ. ಭಗವದ್ಗೀತೆ, ಚಾಣಕ್ಯ ನೀತಿ ಬಗ್ಗೆ ಮಾತನಾಡಬಲ್ಲೇ. ಸಮಯ ಬಂದಾಗ ಈ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಯಾರಿಗೂ ನೋಯಿಸಲು ಬಯಸುವುದಿಲ್ಲ. ನನ್ನ ಧರ್ಮವನ್ನು ನಾನು ಬಿಡಲು ತಯಾರಿಲ್ಲ. ನಾನು ಹುಟ್ಟಿದ್ದು ಹಿಂದೂವಾಗಿ. ಜೊತೆಗೆ ಕ್ರೈಸ್ತ, ಇಸ್ಲಾಂ, ಜೈನ ಸಿದ್ಧಾಂತದ ಮೇಲೂ ನಂಬಿಕೆ ಹೊಂದಿರುವವನು. ಧರ್ಮ ಯಾವುದಾದರೂ ತತ್ವ ಒಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು ಎಂದು ನಂಬಿರುವವನು ನಾನು. ಸೂರ್ಯ, ಚಂದ್ರ, ಬೆಳಕು, ನೀರಿಗೆ ಜಾತಿ, ಧರ್ಮದ ಬೇಧವಿಲ್ಲ. ಪ್ರವಾದಿ ಮೊಹಮದ್ ಪೈಗಂಬರ್ ಅವರ ದಿವ್ಯವಾಣಿ ಬಗ್ಗೆ, ಬುದ್ಧ-ಬಸವಣ್ಣನ ತತ್ವದ ಬಗ್ಗೆ ಅರಿತಿರುವವನು ನಾನು” ಎಂದರು.

“ನನ್ನ ಈ ಹೇಳಿಕೆಯಲ್ಲಿ ರಾಜಕಾರಣ ಮಾಡಬಹುದು, ಕೆಸರೆರಚಾಟ ಮಾಡಬಹುದು ಎಂದು ಭಾವಿಸಿದ್ದರೆ ಅದು ಸುಳ್ಳು. ಓಹ್ ಗಾಡ್ ಗಿವ್ ಮಿ ಸ್ಟ್ರೇಂತ್ ಟು ಬಿ ಪ್ರೊಟೆಕ್ಟೆಡ್ ಫ್ರಂ ಮೈ ಫ್ರೆಂಡ್ಸ್. ಸೋ ದಟ್ ಐ ಕ್ಯಾನ್ ಟೇಕ್ ಕೇರ್ ಮೈ ಎನಿಮೀಸ್ (ಓ ದೇವರೇ, ನನ್ನ ಸ್ನೇಹಿತರಿಂದ ನನ್ನನ್ನು ಕಾಪಾಡಿಕೊಳ್ಳುವ ಶಕ್ತಿಯನ್ನು ನನಗೆ ಕೊಡು. ಉಳಿದಂತೆ ನನ್ನ ಶತ್ರುವನ್ನು ನಾನು ನೋಡಿಕೊಳ್ಳುತ್ತೇನೆ) ಎಂಬ ಪ್ಲೇಟೋ ಅವರ ಮಾತಿನ ಮೇಲೆ ನಂಬಿಕೆ ಹೊಂದಿರುವವನು” ಎಂದು ಹೇಳಿದರು.

ಮಾಧ್ಯಮಗಳ ಮುಂದೆಯಲ್ಲ, ಪಕ್ಷದ ಕಚೇರಿಯಲ್ಲಿ ಸಭೆ ಕರೆಯಿರಿ, ಉತ್ತರ ನೀಡುತ್ತೇನೆ

“ನಾನು ಬಿಹಾರಕ್ಕೆ ಹೋದಾಗ ಅಲ್ಲಿ ಕೆಲವರು ನನ್ನನ್ನು ಕೇಳಿದರು. ನನ್ನ ಪಕ್ಷದ ಕೆಲವು ಹಿರಿಯ ನಾಯಕರು, ಸ್ನೇಹಿತರು ನನಗೆ ಬಹಳ ಸಲಹೆ ನೀಡಿರುವುದಕ್ಕೆ ಸಂತೋಷವಿದೆ. ನಾನು ಬೇರೆಯವರಿಗಿಂತ ದೊಡ್ಡವನಲ್ಲ. ಚಿಕ್ಕವನಾಗಿಯೇ ಇದ್ದೇನೆ. ಈ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವುದಲ್ಲ, ಕಾಂಗ್ರೆಸ್ ಪಕ್ಷದ ಕಚೇರಿಗೆ ಬನ್ನಿ ಮಾತನಾಡೋಣ. ಯಾವ ರೀತಿ ಉತ್ತರ ಕೊಡಬೇಕೋ ಕೊಡುತ್ತೇನೆ. ಮಾಧ್ಯಮಗಳ ಮುಂದೆ ಮಾತನಾಡಿದರೆ ನಿಮಗೆ ತೃಪ್ತಿ ಸಿಗಬಹುದು. ಬೇರೆ ಪ್ರಯೋಜನವಿಲ್ಲ. ನಿಮ್ಮ ಉತ್ತಮ ಸಲಹೆಗಳನ್ನು ನಾನು ಸ್ವೀಕರಿಸುತ್ತೇನೆ. ನಾನು ನನ್ನ ಬದುಕನ್ನು ಬೇರೆಯವರಿಗೆ ಶಕ್ತಿ ತುಂಬಲು ಬಳಸುತ್ತೇನೆ. ಎಲ್ಲರ ಕಷ್ಟ ಕಾಲದಲ್ಲಿ ನಾನು ಅವರ ಜೊತೆಗೆ ನಿಂತಿದ್ದೆ. ನಾನು ಯಾವ ಹುದ್ದೆಯಲ್ಲಿದ್ದೇನೆ, ಯಾವ ಹುದ್ದೆಯಲ್ಲಿ ಇಲ್ಲ, ಯಾವ ಹುದ್ದೆಗೆ ಹೋಗುತ್ತೇನೆ, ಯಾವ ಹುದ್ದೆಗೆ ಹೋಗುವುದಿಲ್ಲ ಎಂಬುದು ಮುಖ್ಯವಲ್ಲ. ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ” ಎಂದು ಸ್ಪಷ್ಟಪಡಿಸಿದರು.

“ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಮಾಧ್ಯಮಗಳು ನನ್ನನ್ನು ಬೆಳೆಸಿದ್ದು, ನೀವು ನನ್ನನ್ನು ಟೀಕೆ ಮಾಡಿದಾಗಲೂ ನಾನು ಅವುಗಳನ್ನು ಸ್ವಾಗತಿಸಿದ್ದೇನೆ. ನೀವು ಮಾರ್ಗದರ್ಶನ ನೀಡಿ ನನ್ನನ್ನು ತಿದ್ದಿದ್ದೀರಿ. ಬೇರೆಯವರು ಹೇಳಿದ್ದನ್ನೂ ನೀವು ಪ್ರಸಾರ ಮಾಡುತ್ತೀರಿ. ಆದರೂ ನಾನು ಮಾಧ್ಯಮಗಳನ್ನು ನನ್ನ ಹಿತೈಷಿಗಳು, ಮಾರ್ಗದರ್ಶಕರು ಎಂದು ಭಾವಿಸಿದ್ದೇನೆ” ಎಂದು ತಿಳಿಸಿದರು.

ಪ್ರಶ್ನೋತ್ತರ

ನನ್ನ ಬಗ್ಗೆ ಮಾತ್ರವಲ್ಲ, ನನ್ನ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಎಂದು ಹೈಕಮಾಂಡ್ ಗಮನಿಸುತ್ತದೆ

ಈ ವಿಚಾರವಾಗಿ ಬಿಹಾರದಲ್ಲಿ ರಾಹುಲ್ ಗಾಂಧಿ ಅವರು ಸ್ಪಷ್ಟನೆ ಕೇಳಿದ್ದಾರಾ ಎಂಬ ಪ್ರಶ್ನೆಗೆ, “ನನಗೆ ಯಾರೂ ಈ ವಿಚಾರವಾಗಿ ಪ್ರಶ್ನೆ ಮಾಡಿಲ್ಲ. ಹೈಕಮಾಂಡಿನ ಯಾವುದೇ ನಾಯಕರು ಈ ವಿಚಾರವಾಗಿ ನನ್ನ ಜೊತೆ ಮಾತನಾಡಿಲ್ಲ. ಅವರು ಚರ್ಚೆ ಮಾಡಿರಬಹುದು, ಬೇರೆಯವರಿಂದ ಮಾಹಿತಿ ಪಡೆದಿರಬಹುದು. ಅವರು ಈ ವಿಚಾರವಾಗಿ ತಿಳಿದುಕೊಳ್ಳುವುದಿಲ್ಲ ಎಂದು ಹೇಳುವುದಿಲ್ಲ. ಎಲ್ಲರಿಗೂ ನನ್ನ ಮೇಲೆ ನಂಬಿಕೆ ಇದೆ. ಎಲ್ಲಿ ಹುಟ್ಟಿದ್ದೇನೆ, ಎಲ್ಲಿ ಸಾಯುತ್ತೇನೆ ಎಂದು ಎಲ್ಲರಿಗೂ ಗೊತ್ತಿದೆ. ನಮ್ಮ ಪಕ್ಷದ ಹೈಕಮಾಂಡ್ ನಾನು ಮಾತ್ರವಲ್ಲ, ನನ್ನ ಅಕ್ಕಪಕ್ಕದಲ್ಲಿ ಏನೇನಾಗುತ್ತಿದೆ ಎಂಬುದರ ಬಗ್ಗೆಯೂ ಅಧ್ಯಯನ ಮಾಡಿರುತ್ತದೆ” ಎಂದು ತಿಳಿಸಿದರು.

ಪಾಂಚಜನ್ಯ ಎಂದು ಹೆಸರಿಟ್ಟಿದ್ದಕ್ಕೆ ಸೋನಿಯಾ ಗಾಂಧಿಗೆ ದೂರು ನೀಡಿದ್ದರು

ರಾಹುಲ್ ಗಾಂಧಿ ಅವರು ವಿರೋಧಿಸುವ ಸಿದ್ಧಾಂತವನ್ನು ನೀವು ಪ್ರಸ್ತಾಪಿಸುವಾಗ ಎಡವಿದ್ದೀರಿ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನಾನು ಎಲ್ಲಿಯೂ ಎಡವಿಲ್ಲ. ನಾನು ಅವರನ್ನು (ಆರ್ ಎಸ್ಎಸ್) ಹೊಗಳಿದ್ದೇನಾ? ಪಕ್ಷದ ಅಧ್ಯಕ್ಷನಾಗಿ ಎದುರಾಳಿಗಳ ವಿಚಾರ ತಿಳಿದುಕೊಂಡಿರಬೇಕಲ್ಲವೇ? ಕೃಷ್ಣ ಅವರ ನೇತೃತ್ವದಲ್ಲಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಪಾಂಚಜನ್ಯ ಎಂದು ಹೆಸರಿಟ್ಟಿದ್ದೆ. ಕೇಂದ್ರ ಸಚಿವರೊಬ್ಬರು ಸೋನಿಯಾ ಗಾಂಧಿ ಅವರ ಬಳಿ ದೂರು ಹೇಳಿದ್ದರು. ಪಾಂಚಜನ್ಯ ಆರ್ ಎಸ್ಎಸ್ ಮುಖವಾಣಿ ಎಂದೆಲ್ಲಾ ಹೇಳಿದ್ದರು. ಸೋನಿಯಾ ಗಾಂಧಿ ಅವರು ನನ್ನನ್ನು ಕರೆದು ವಿಚಾರಿಸಿದರು. ಪಾಂಚಜನ್ಯ ಕೃಷ್ಣನ ಶಂಖದ ಹೆಸರು. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ| ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ಎಂಬ ಶ್ಲೋಕವಿದೆ. ಅಧರ್ಮ ನಾಶವಾಗಿ, ಮತ್ತೆ ಧರ್ಮ ಸ್ಥಾಪನೆಯಾಗಲಿದೆ ಎಂದು ಕೃಷ್ಣಾ ಅವರ ಕೈಯಲ್ಲಿ ಹೇಳಿಸಿ ಶಂಖ ಊದಿಸಿ ನಾವು ನಮ್ಮ ಯುದ್ಧ ಆರಂಭಿಸಿದೆವು. ನಂತರ ಗೆದ್ದು ಅಧಿಕಾರಕ್ಕೆ ಬಂದೆವು. ಅದೇ ರೀತಿ ಪ್ರಜಾವಾಣಿ, ಕನ್ನಪಪ್ರಭ, ಸಂಯುಕ್ತ ಕರ್ನಾಟಕ, ಎನ್ ಡಿಟಿವಿ, ರಿಪಬ್ಲಿಕ್, ಟೈಮ್ಸ್ ನೌ ವಿಭಿನ್ನ ಸಿದ್ಧಾಂತದ ಮೇಲೆ ಕೆಲಸ ಮಾಡುತ್ತಿವೆ. ಅದರಲ್ಲಿ ತಪ್ಪೇನಿದೆ” ಎಂದು ತಿಳಿಸಿದರು.

ಎಲ್ಲಾ ಧರ್ಮ ಹಾಗೂ ಮನುಷ್ಯತ್ವದ ಮೇಲೆ ನಂಬಿಕೆ ಇರುವವನು

ನಿಮ್ಮ ಮೃದು ಹಿಂದುತ್ವವನ್ನು ನಿಮ್ಮ ಪಕ್ಷದವರು ಸಹಿಸುತ್ತಿಲ್ಲ ಎಂದು ಕೇಳಿದಾಗ, “ನಾನು ನನ್ನ ಹಿಂದೂ ಗುರುತನ್ನು ಮರೆಮಾಚುವುದಿಲ್ಲ. ಇಲ್ಲಿಗೆ ಬರುವ ಮುನ್ನ ಧರ್ಮಸ್ಥಳದ ತಿಲಕ ಇಟ್ಟುಕೊಂಡು ಬಂದಿದ್ದೇನೆ. ನಾನು ದಿನ ಬೆಳಗಾದರೆ ನನ್ನ ಅಜ್ಜಯ್ಯನನ್ನು ಪೂಜಿಸುತ್ತೇನೆ. ಅವರು ಈಗ ಇಲ್ಲದಿದ್ದರೂ ನಾನು ಅವರನ್ನು ನಂಬುತ್ತೇನೆ. ನಾನು ಎಷ್ಟೋ ಚರ್ಚ್ ಪಾದ್ರಿಗಳನ್ನು, ಮೌಲ್ವಿಗಳನ್ನು ಭೇಟಿ ಮಾಡುತ್ತೇನೆ. ಮೊನ್ನೆಯಷ್ಟೇ ಕೇರಳದ ದೊಡ್ಡ ಗುರೂಜಿಗಳು ಕರೆ ಮಾಡಿ ಆಶೀರ್ವಾದ ಮಾಡಿದರು. ಜೈನ ಧರ್ಮದ ಮೇಲೂ ನನಗೆ ನಂಬಿಕೆ ಇದೆ. ಅವರ ದೇವಾಲಯಕ್ಕೂ ಹೋಗುತ್ತೇನೆ, ಅವರೂ ನನಗೆ ಆಶೀರ್ವಾದ ಮಾಡುತ್ತಾರೆ. ನಾನು ಜಾತ್ಯಾತೀತ ಮನುಷ್ಯ. ನನಗೆ ಎಲ್ಲಾ ಧರ್ಮದ ಮೇಲೆ, ಮನುಷ್ಯತ್ವದ ಮೇಲೆ ನಂಬಿಕೆ ಇರುವವನು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ನಮ್ಮ ಗಂಗಾಧರ ಅಜ್ಜಯ್ಯನ ಸಂದೇಶ. ನನಗೆ ಅದರ ಮೇಲೆ ನಂಬಿಕೆ ಇದೆ” ಎಂದು ತಿಳಿಸಿದರು.

ವಿರೋಧ ಪಕ್ಷಕ್ಕಿಂತ ಸ್ವಪಕ್ಷೀಯರೇ ಹೆಚ್ಚು ಶತ್ರುಗಳಿದ್ದಾರಲ್ಲಾ ಎಂದು ಕೇಳಿದಾಗ, “ಅವರೆಲ್ಲರೂ ಹಿರಿಯ ನಾಯಕರು, ನನ್ನ ಸ್ನೇಹಿತರು. ಅವರು ನನ್ನ ಸಹೋದರರು. ಅವರು ನನಗೆ ಮಾರ್ಗದರ್ಶನ ತೋರುತ್ತಾರೆ” ಎಂದು ತಿಳಿಸಿದರು.

ಕ್ಷಮೆ ಕೇಳಬೇಕು ಎಂಬ ಹರಿಪ್ರಸಾದ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕ್ಷಮೆ ನಿನಗೂ ಕೇಳೋಣ, ಅವರಿಗೂ ಕೇಳೋಣ ಬಿಡು” ಎಂದರು.

ನಿಮಗೊಂದು ಕಾನೂನು ತಮಗೊಂದು ಕಾನೂನು ಎಂದು ರಾಜಣ್ಣ ಅವರು ಹೇಳಿದ್ದಾರೆ ಎಂದು ಕೇಳಿದಾಗ, “ಅವರ ಸಲಹೆ ಕೇಳೋಣ. ಅವರು ಯಾರಿಗೆ ಸಲಹೆ ನೀಡುತ್ತಾರೋ ನೀಡಲಿ. ಅವರಿಗೆ ಶುಭವಾಗಲಿ” ಎಂದರು.

ನಿಮ್ಮ ಪಕ್ಷದವರೆ ನಿಮ್ಮ ಬದ್ಧತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ದೇವರು ಅವರಿಗೆ ಬಾಯಿ ಕೊಟ್ಟಿದ್ದಾನೆ, ಅವಕಾಶ ಸಿಕ್ಕಿದೆ ಹೀಗಾಗಿ ಅವರು ಸಂತೋಷದಿಂದ ಮಾತನಾಡುತ್ತಿದ್ದಾರೆ. ಮಾತನಾಡಲಿ. ಅವರಿಗೆ ಶುಭ ಕೋರುತ್ತೇನೆ. ನಮ್ಮ ಸ್ನೇಹಿತರನ್ನು ನಾವು ಅರಿಯೋಣ” ಎಂದು ತಿಳಿಸಿದರು.

ಇದೇ ವೇಳೆ ರಾಜ್ಯದ ಸಮಸ್ತ ಜನರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ರಾಜಕೀಯ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್ ಕಿಡಿ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್

"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ (D.K. Shivakumar) ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ... R. Ashoka

[ccc_my_favorite_select_button post_id="113127"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

17 ವರ್ಷದ ಬಾಲಕನ ಶವ ಆಘಾತಕಾರಿ ಸ್ಥಿತಿಯಲ್ಲಿ (shocking condition) ಪತ್ತೆಯಾಗಿರುವ ಘಟನೆ ನಗರದ ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಪತ್ತೆಯಾಗಿದೆ.

[ccc_my_favorite_select_button post_id="113099"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!