Harithalekhani: ಒಂದು ಊರಿನಲ್ಲಿ ನರಸಿಂಹವರ್ಮ ಎಂಬ ರಾಜನಿದ್ದನು. ಅವನು ಬಹಳ ಕ್ರೂರಿಯಾಗಿದ್ದನು. ಜನರನ್ನು ಹಿಂಸಿಸುತ್ತಿದ್ದನು. ಅವನನ್ನು ಕಂಡರೆ ಜನರಿಗೆ ಭಯವಾಗುತ್ತಿತ್ತು. ಒಂದು ದಿನ ತೆರಿಗೆ ಪಾವತಿಸಿಲ್ಲದವರನ್ನು ವಿಚಾರಿಸುತ್ತಿದ್ದನು. ಒಬ್ಬ ಬಂದ. ರಾಜ, ‘ಏಕೆ ತೆರಿಗೆ ಪಾವತಿಸಿಲ್ಲ?’ ಎಂದನು.
ಬಡವ ಭಯದಿಂದ, ‘ನನ್ನ ಹೆಂಡತಿಗೆ ಆರೋಗ್ಯ ಸರಿಯಿಲ್ಲ. ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಹಣವೆಲ್ಲಾ ಖರ್ಚಾಯಿತು. ಆದ್ದರಿಂದ ತೆರಿಗೆ ಕಟ್ಟಿಲ್ಲ’ ಎಂದನು. ‘ಎರಡು ದಿನ ಕಾಲಾವಕಾಶ ಕೊಡಿ’ ಎಂದನು. ರಾಜ, ‘ಇವನ ತಪ್ಪಿಗೆ ಇವನ ಕೈಕಾಲುಗಳನ್ನು ಕತ್ತರಿಸಿ’ ಎಂದನು.
ಮತ್ತೊಬ್ಬ ಬಂದ. ರಾಜ, ‘ನೀನೇಕೆ ತೆರಿಗೆ ಕಟ್ಟಿಲ್ಲ?’ ಎಂದ. ‘ಸ್ವಾಮಿ, ಅಂಗಡಿಯಲ್ಲಿ ವ್ಯಾಪಾರವಾಗಿಲ್ಲ. ಆದ್ದರಿಂದ ತೆರಿಗೆ ಪಾವತಿಸಿಲ್ಲ’. ‘ಇವನನ್ನು ಕರೆದುಕೊಂಡು ಹೋಗಿ ಇವನ ತಲೆಯನ್ನು ಕತ್ತರಿಸಿ ಎಸೆಯಿರಿ’ ಎಂದ ರಾಜ. ಹೀಗೆ ರಾಜ ಜನರಿಗೆ ಕಿರುಕುಳ ಕೊಡುತ್ತಿದ್ದನು. ಒಂದು ದಿನ ಆತ ಕುದುರೆ ಸವಾರಿ ಮಾಡಿಕೊಂಡು ಬರುತ್ತಿದ್ದ. ಆಗ ದಾರಿಯ ಮಧ್ಯದಲ್ಲಿ ಒಂದು ಕೊಂಬೆ ಅಡ್ಡಲಾಗಿ ಬಿತ್ತು. ರಾಜ ಕೋಪಗೊಂಡು ಸೈನಿಕರಿಗೆ ಆ ಮರವನ್ನು ಕಡಿಯುವಂತೆ ಹೇಳಿದನು. ಆ ಮರದಲ್ಲಿ ನೂರಾರು ಹಕ್ಕಿಗಳು ವಾಸವಾಗಿದ್ದವು, ಅವುಗಳೆಲ್ಲ ನಾಶವಾದವು.
ಆ ಮರದಲ್ಲಿದ್ದ ಹಕ್ಕಿಯೊಂದು ಬದುಕುಳಿಯಿತು. ಅದು ಕೋಪದಿಂದ ಹಾರಿಬಂದು ತನ್ನ ಸ್ನೇಹಿತನಾದ ನಾಗರಹಾವನ್ನು ಭೇಟಿ ಮಾಡಿತು. ನಡೆದ ವಿಷಯವನ್ನೆಲ್ಲಾ ತಿಳಿಸಿತು. ಇಬ್ಬರೂ ಜೊತೆಗೂಡಿ ರಾಜನನ್ನು ಕೊಲ್ಲಲು ನಿರ್ಧರಿಸಿದವು.
ರಾಜನು ಕೊಳದಲ್ಲಿ ಸ್ನಾನ ಮಾಡುವಾಗ ನಾಗರಹಾವು ರಾಜನ ಕುತ್ತಿಗೆಗೆ ಸುತ್ತಿಕೊಂಡಿತು. ರಾಜ ‘ಕಾಪಾಡಿ ಕಾಪಾಡಿ’ ಎಂದು ರಕ್ಷಣೆಗೆ ಮೊರೆಯಿಟ್ಟ. “ನೀವ್ಯಾರು? ನನ್ನನ್ನು ಏಕೆ ಕೊಲ್ಲುತ್ತಿದ್ದೀರಿ? ಎಂದ. ಕೊಳದ ಪಕ್ಕದಲ್ಲಿದ್ದ ಹಕ್ಕಿಯು, ‘ಆವತ್ತು ನೀನು ಒಂದು ಮರವನ್ನು ಕಡಿಯುವಂತೆ ಆಜ್ಞೆ ಮಾಡಿದೆಯಲ್ಲವೇ?’ ಎಂದಿತು.
ರಾಜ, ‘ಹೌದು’ ಎಂದ. ‘ಆ ಮರದಲ್ಲಿ ವಾಸವಿದ್ದ ಒಂದು ಹಕ್ಕಿ ನಾನು’ ಎಂದಿತು.
ರಾಜ, ‘ನನ್ನನ್ನು ಕ್ಷಮಿಸು’ ಎಂದು ಬೇಡಿಕೊಂಡನು.
ನಾಗರಹಾವು ರಾಜನನ್ನು ಕೊಂದು ಹಾಕುವುದಕ್ಕೆ ಗಟ್ಟಿಯಾಗಿ ಕುತ್ತಿಗೆಗೆ ಸುತ್ತಿಕೊಂಡಿತು. ರಾಜ, ‘ಯಾರಾದರೂ ಕಾಪಾಡಿ’ ಎಂದು ಕೂಗಿಕೊಳ್ಳುತ್ತಿದ್ದನು.
ರಾಜ ಮಾಡಿದ ಪಾಪದಿಂದ ಮತ್ತು ಆತ ಜನರಿಗೆ ಕೊಟ್ಟ ಕಷ್ಟದಿಂದ ಯಾರೂ ರಾಜನನ್ನು ಉಳಿಸಲು ಬರಲಿಲ್ಲ. ನಾಗರಾಜ ರಾಜನನ್ನು ಕೊಂದಿತು. ಆಗ ಜನರೆಲ್ಲ ಸಂಭ್ರಮದಿಂದ ಕುಣಿದಾಡಿದರು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು. (ಸರ್ಕಾರಿ ಲೈಬ್ರರಿಯಿಂದ)