ಆರಾ: ಬಿಹಾರದ ಪಟನಾದಲ್ಲಿ ಆ.17ರಂದು ಆರಂಭಿಸಿದ ‘ಮತದಾರ ಅಧಿಕಾರ ಯಾತ್ರೆ’ (Voter Adhikar Yatra) 13 ದಿನಗಳ ಬಳಿಕ ಭರ್ಜರಿ ಯಶಸ್ಸಿನೊಂದಿಗೆ ಭಾನುವಾರ ಪೂರ್ಣಗೊಳಿಸಿದೆ.
ಅಂತಿಮ ದಿನದ ಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿ ಸಮ್ಮುಖದಲ್ಲಿ ಮಾತನಾಡಿದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶಾದ್ಯಂತ ನಡೆದಿರುವ ವೋಟ್ ಚೋರಿಯನ್ನು ಸಾರ್ವಜನಿಕವಾಗಿ ಬಯಲು ಮಾಡುವುದಾಗಿ ಘೋಷಿಸಿದ್ದಾರೆ.
ಚುನಾವಣಾ ಆಯೋಗ ‘ವೋಟ್ ಚೋರಿ’ (ಮತ ಕಳವು) ನಡೆಸುತ್ತಾ ಬಿಜೆಪಿಗೆ ಅಧಿಕಾರಕ್ಕೇರಲು ನೆರವಾಗುತ್ತಿದೆ ಎಂದು ಆರೋಪಿಸುತ್ತಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ನಮ್ಮ ಹೋರಾಟದಿಂದ ಬಿಜೆಪಿಗರಲ್ಲಿ ಆತಂಕ ಮನೆಮಾಡಿದೆ ಎಂದು ಹೇಳಿದರು.
ಜನರ ಮತಹಕ್ಕು ಕಸಿದು ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಬಿಹಾರದಲ್ಲಿ ಆ ರೀತಿಯಾಗಲು ನಾವು ಬಿಡುವುದಿಲ್ಲ ಎಂದಿರುವ ಅವರು, ಬಿಹಾರದಲ್ಲಿ ಇತ್ತೀಚೆಗೆ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ‘ವಿಶೇಷ ಕ್ಷಿಪ್ರ ಪರಿಷ್ಕರಣೆ’ (ಎಸ್‌ಐಆರ್) ಸಂವಿಧಾನ ಮತ್ತು ಪ್ರಜಾಪ್ರಭುತ್ತದ ಮೇಲಿನ ದಾಳಿಯಾಗಿದೆ ಎಂದಿದ್ದಾರೆ.
2024ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮತ್ತು ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಸೇರಿದಂತೆ ದೇಶದ ಹಲವೆಡೆ ಚುನಾವಣಾ ಆಯೋಗ ಮತ್ತು ಬಿಜೆಪಿ ಸೇರಿಕೊಂಡು ಮತ ಕಳವು ನಡೆಸಿದ್ದಾರೆ. ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಮತದಾನ ಹಕ್ಕನ್ನು ನರೇಂದ್ರ ಮೋದಿ ಸರಕಾರ ಕಸಿಯುತ್ತಿದೆ. ಜನತೆ ಅವರನ್ನು ಮತಕಳ್ಳರು ಎಂದು ಕರೆಯುತ್ತಿದ್ದಾರೆ’ ಎಂದು ಟೀಕಿಸಿದರು.
ಇದೇ ವೇಳೆ ಬಿಜೆಪಿ ಹಾಗೂ ಮತದಾರರ ಅಧಿಕಾರ ಯಾತ್ರೆಯ ಕುರಿತು ವರದಿ ಪ್ರಸಾರ ಮಾಡದ ಖಾಸಗಿ ಚಾನಲ್‌ಗಳಿಗೆ ಸವಾಲು ಎಸೆದಿರುವ ಅವರು ಅವರು, ಕರ್ನಾಟಕ, ಹರಿಯಾಣ, ಮಹಾರಾಷ್ಟ್ರದಲ್ಲಿ ಬಿಜೆಪಿ ನಡೆಸಿರುವ ವೋಟ್ ಚೋರಿ(ಮತ ಕಳ್ಳತನ) ವನ್ನು ದೇಶದ ಜನರ ಮುಂದೆ ತೆರೆದಿಡುತ್ತೇವೆ ಎಂದು ಸವಾಲು ಎಸೆದಿದ್ದಾರೆ.
ಬಿಹಾರದಲ್ಲಿ ಕಳೆದ 13 ದಿನಗಳಿಂದ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ನೇತೃತ್ವದ ನಡೆದ ಮತದಾರರ ಅಧಿಕಾರ ಯಾತ್ರೆಗೆ ಜನ ಬೆಂಬಲ ದೊರೆತಿದ್ದು, ಖಾಸಗಿ ಚಾನಲ್‌ಗಳು ವರದಿ ಮಾಡದೇ ಇದ್ದರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ತಮಿಳುನಾಡು ಸಿಎಂ ಸ್ಟಾಲಿನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಸಂಸದ ಅಖಿಲೇಶ್ ಯಾದವ್ ಭಾಗವಹಿಸಿ ಬಿಜೆಪಿ ಹಾಗೂ ಚುನಾವಣೆ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾತ್ರೆ ಸಾಗಿದ ಕಡೆಯೆಲ್ಲ ಲಕ್ಷಾಂತರ ಮಂದಿ ಭಾಗವಹಿಸಿ ಭರ್ಜರಿ ಬೆಂಬಲ ಸೂಚಿಸಿದ್ದಾರೆ. ಯಾತ್ರೆಗೆ ದೊರೆತ ಜನ ಬೆಂಬಲದ ಕುರಿತು ವರದಿ ಮಾಡದ ಖಾಸಗಿ ಚಾನಲ್‌ಗಳು, ಪತ್ರಿಕೆಗಳು ಕೇವಲ ರಾಹುಲ್ ಗಾಂಧಿ ಅವರ ತಪ್ಪುಗಳು ಹುಡುಕಿ ದೊಡ್ಡದಾಗಿ ವರದಿ ಪ್ರಕಟಸಿದವಾದರೂ, ಯಾತ್ರೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.